ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ: ಚಿಕ್ಕಬಳ್ಳಾಪುರದತ್ತ ಕಾಂಗ್ರೆಸ್ ನಾಯಕರ ಮುಖ
ಚಿಕ್ಕಬಳ್ಳಾಪುರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕೋಲಾರ ಕಾಂಗ್ರೆಸ್ ಟಿಕೆಟ್ ಮೇಲೆ ದೃಷ್ಟಿಯಿಟ್ಟಿದ್ದ ಮುಖಂಡರಿಗೆ ಈಗ ಕ್ಷೇತ್ರ ಇಲ್ಲವಾಗಿದೆ. ಈ ಮುಖಂಡರು ಚಿಕ್ಕಬಳ್ಳಾಪುರ ಜಿಲ್ಲೆಯ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ.
'ಹೊರಗಿನ ಅಭ್ಯರ್ಥಿ'ಗಳು ಬರುತ್ತಿರುವುದು ಆಯಾ ಕ್ಷೇತ್ರಗಳ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಸಹ ಮೂಡಿಸಿದೆ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮುರಿದಿದೆ.
ಒಂದು ವೇಳೆ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಸ್ಥಳೀಯ ನಾಯಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವರೇ? ಈ ಅಸಮಾಧಾನ ಎದುರಾಳಿ ಪಕ್ಷಗಳಿಗೆ ಅನುಕೂಲವಾಗುವುದೇ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕೋಲಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಜಾತಿ ಪ್ರಮಾಣ ಪತ್ರದ ವಿಚಾರ ನ್ಯಾಯಾಲಯದಲ್ಲಿರುವ ಕಾರಣ ಮುಳಬಾಗಿಲಿನಲ್ಲಿ ಸ್ಪರ್ಧೆ ಸಾಧ್ಯವಾಗದಿದ್ದರೆ ಸಾಮಾನ್ಯ ಕ್ಷೇತ್ರ ಕೋಲಾರದಿಂದ ಸ್ಪರ್ಧಿಸುವೆ ಎಂದು ಕೊತ್ತೂರು ಮಂಜುನಾಥ್ ಬಹಿರಂಗವಾಗಿ ಘೋಷಿಸಿದ್ದರು. ಗೋವಿಂದಗೌಡ ಸಹ ಕೋಲಾರ ಕ್ಷೇತ್ರದ ಟಿಕೆಟ್‌ಗೆ ಲಾಬಿ ನಡೆಸಿದ್ದರು.
ಸಿದ್ದರಾಮಯ್ಯ ಅವರ ಕೋಲಾರ ಪ್ರವೇಶದಿಂದ ಈ ಇಬ್ಬರ ಆಸೆಗೆ ತಣ್ಣೀರು ಎರೆಚಿದಂತೆ ಆಗಿದೆ. ಈ ಇಬ್ಬರು ಮುಖಂಡರು ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ಕ್ಷೇತ್ರದತ್ತ ಮುಖ ಮಾಡಿದ್ದಾರೆ.
ಕೊತ್ತೂರು ಮಂಜುನಾಥ್ ಅಭ್ಯರ್ಥಿ ಆಗಬೇಕು ಎಂದು ಚಿಕ್ಕಬಳ್ಳಾಪುರದ ಕೆಲವು ಕಾಂಗ್ರೆಸ್ ನಾಯಕರು ವೀಕ್ಷಕರಿಗೆ ಸಹಿ ಮಾಡಿ ಪತ್ರ ನೀಡಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಎನ್. ಶ್ಯಾಮ್ 'ಹೊರಗಿನ ಅಭ್ಯರ್ಥಿಗೆ ಸಹಕಾರವಿಲ್ಲ' ಎಂದು ಒತ್ತಿ ಹೇಳುತ್ತಿದ್ದಾರೆ. ಅವರ ಬೆಂಬಲಿಗರು ಸಹ ಆಗಾಗ್ಗೆ ಸುದ್ದಿಗೋಷ್ಠಿ ನಡೆಸಿ ವಿನಯ್ ಶ್ಯಾಮ್ ಪರ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನ ವಾಟ್ಸ್‌ಆಯಪ್ ಗ್ರೂಪ್‌ಗಳು, ಫೇಸ್‌ಬುಕ್ ಪುಟಗಳಲ್ಲಿ ಕೆಲವರು ಕೊತ್ತೂರು ಪರ; ಮತ್ತೆ ಕೆಲವರು ವಿನಯ್ ಶ್ಯಾಮ್ ಪರ ವಾಗ್ವಾದ ನಡೆಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ 'ಪ್ರಜಾಧ್ವನಿ' ಯಾತ್ರೆಯಲ್ಲಿ ಕೊತ್ತೂರು ಮಂಜುನಾಥ್ ಹಾಜರಿ ಅವರ ಪರ ಘೋಷಣೆಗಳು ಚಿಕ್ಕಬಳ್ಳಾಪುರ ಕಾಂಗ್ರೆಸ್ ಅನ್ನು ಮನೆಯೊಂದು ಮೂರು ಬಾಗಿಲಾಗಿಸಿದೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಶಿಡ್ಲಘಟ್ಟ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ. ಭಾನುವಾರ ವಿಜಯಪುರದಲ್ಲಿ ನಡೆದ ಸಭೆಯಲ್ಲಿ ಶಾಸಕ ವಿ. ಮುನಿಯಪ್ಪ ಖುದ್ದು ಗೋವಿಂದಗೌಡ ಅಭ್ಯರ್ಥಿ ಎಂದು ಪ್ರಕಟಿಸಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಿಂದ ರಾಜೀವನ್ ಗೌಡ, ಆಂಜನಪ್ಪ ಪುಟ್ಟ ಟಿಕೆಟ್ ಆಕಾಂಕ್ಷಿಗಳಾಗಿದ್ದರು.
ಮುನಿಯಪ್ಪ, ಗೋವಿಂದಗೌಡ ಹೆಸರು ಘೋಷಿಸುತ್ತಿದ್ದಂತೆ ರಾಜೀವ್ ಗೌಡ ಟಿಕೆಟ್‌ಗಾಗಿ ದೆಹಲಿ ಮಟ್ಟದಲ್ಲಿ ಲಾಬಿ ಮಾಡಲು ತೆರಳಿದ್ದಾರೆ. ಆಂಜನಪ್ಪ ಪುಟ್ಟು, ಕೃಷ್ಣಬೈರೇಗೌಡ ಅವರ ಮೂಲಕ ವರಿಷ್ಠರ ಮನವೊಲಿಕೆಗೆ ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು. ಆಂಜನಪ್ಪ ಬುಧವಾರ ಬೆಂಬಲಿಗರ ಸಭೆ ಸಹ ಕರೆದಿದ್ದಾರೆ.
ಚಿಕ್ಕಬಳ್ಳಾಪುರ ಜತೆಗೆ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿಯೂ ಸ್ಥಳೀಯ ಮತ್ತು ಹೊರಗಿನ ಅಭ್ಯರ್ಥಿಗಳು ಎನ್ನುವ ಚರ್ಚೆ ಈಗ ಆರಂಭವಾಗಿದೆ.
'ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಕೋಲಾರ ಜಿಲ್ಲೆಯವರು. ಚಿಮುಲ್ ರಚನೆಗೂ ಮುನ್ನ ಕೋಚಿಮುಲ್ ಅಧ್ಯಕ್ಷರಾಗಿದ್ದವರೂ ಕೋಲಾರದವರು. ಈಗ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಕ್ಷೇತ್ರಕ್ಕೆ ಕೋಲಾರ ಜಿಲ್ಲೆಯ ಮುಖಂಡರನ್ನು ಕರೆ ತಂದು ಟಿಕೆಟ್ ನೀಡಲಾಗುತ್ತಿದೆ. ಹಣವೇ ಚುನಾವಣೆಗೆ ಮಾನದಂಡವಲ್ಲ. ಇದಕ್ಕೆಲ್ಲ ಜಿಲ್ಲೆಯ ಕಾಂಗ್ರೆಸ್ ಶಾಸಕರ ಹೊಂದಾಣಿಕೆ ರಾಜಕಾರಣವೇ ಕಾರಣ. ಪಕ್ಷದಲ್ಲಿ ಗುಂಪುಗಾರಿಕೆಗಳಿಗೆ ಇದು ಆಸ್ಪದವಾಗುತ್ತದೆ' ಎಂದು ಕಾಂಗ್ರೆಸ್ ನಾಯಕರೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಚುನಾವಣೆಯ ಹೊತ್ತಿನಲ್ಲಿ ಎದುರಾಗಿರುವ ಸ್ಥಳೀಯರು ಮತ್ತು ಹೊರಗಿನವರು ಎನ್ನುವ ಅಸಮಾಧಾನ ಚುನಾವಣೆ ಘೋಷಣೆಯಾದ ನಂತರ ಸರಿ ಹೋಗುತ್ತದೆಯೇ? ಕಾಂಗ್ರೆಸ್‌ನ ಈ ಒಡಕು ಎದುರಾಳಿ ಪಕ್ಷಗಳಿಗೆ ಅನುಕೂಲ ತರಲಿದೆಯೇ ಎನ್ನುವ ಚರ್ಚೆ ಸಹ ಜೋರಾಗಿದೆ.