ಶಾಮನೂರು ಶಿವಶಂಕರಪ್ಪ ಜೊತೆ ದರ್ಶನ್‌ ಪ್ರತ್ಯಕ್ಷ, ನಂಜನಗೂಡಿನಲ್ಲಿ ಗೆಲ್ತಾರಾ ಧ್ರುವನಾರಾಯಣ್‌ ಮಗ?

ಶಾಮನೂರು ಶಿವಶಂಕರಪ್ಪ ಜೊತೆ ದರ್ಶನ್‌ ಪ್ರತ್ಯಕ್ಷ, ನಂಜನಗೂಡಿನಲ್ಲಿ ಗೆಲ್ತಾರಾ ಧ್ರುವನಾರಾಯಣ್‌ ಮಗ?

ನಂಜನಗೂಡು, ಮಾರ್ಚ್‌ 31: ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಟಿಕೆಟ್‌ ಪಡೆದುಕೊಂಡಿರುವ ಮಾಜಿ ಸಂಸದ ದಿವಗಂತ ಧ್ರುವನಾರಾಯಣ್‌ ಅವರ ಮಗ ದರ್ಶನ್‌ ಧ್ರುವನಾರಾಯಣ್‌ಗೆ ರಾಜ್ಯದ ಅನೇಕ ಕಾಂಗ್ರೆಸ್‌ ವರಿಷ್ಠರ ಬೆಂಬಲ ಸಿಗುತ್ತಿದೆ.

ದಿನಾಂಕ ಹೊರಬೀಳುತ್ತಿದ್ದಂತೆ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್‌ ಧ್ರುವನಾರಾಯಣ್‌ ಅವರ ಅಕಾಲಿಕ ನಿಧನದಿಂದಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಅವರ ಮಗ ದರ್ಶನ್‌ಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿದೆ.

ದರ್ಶನ್‌ಗೆ ಅನೇಕ ಕಾಂಗ್ರೆಸ್‌ನ ಹಿರಿಯ ನಾಯಕರ ಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯಂತೆ ಹಿರಿಯ ಕಾಂಗ್ರೆಸ್ ನಾಯಕರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಶಾಮನೂರ ಶಿವಶಂಕರಪ್ಪರವರು ನಂಜನಗೂಡಿನ ಸಂಗಮ ಕ್ಷೇತ್ರದ ಶ್ರೀ ಶ್ರೀ ಸದ್ಗುರು ಮಹದೇವತಾತ ಐಕ್ಯ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಯುವನಾಯಕರು ದರ್ಶನ್ ಧ್ರುವನಾರಾಯಣ್ ರವರು ಬರಮಾಡಿಕೊಂಡು ಸ್ವತಃ ತಾವೇ ವಾಹನ ಚಲಾಯಿಸಿಕೊಂಡು ಹಿರಿಯರಾದ ಶಾಮನೂರು ಅವರಿಗೆ ನೆರವಾಗಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಮಾಜಿ ಸಂಸದರಾಗಿದ್ದ ದಿವಂಗತ ಧ್ರುವನಾರಾಯಣ್‌ ಅವರು ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದರು. ಇದು ಈಗ ಅವರ ಮಗನ ಮೇಲೆ ಶಾಮನೂರು ಶಿವಶಂಕರಪ್ಪ ಅವರು ಬೆಂಬಲವನ್ನು ನೀಡಿದ್ದಾರೆ. ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಗಳ ಮೊದಲ ಪಟ್ಟಿ ಹೊರ ಬೀಳುವ ಮುನ್ನವೇ ಧ್ರುವನಾರಾಯಣ್‌ ಸೇರಿದಂತೆ ಮಾಜಿ ಸಚಿವ ಎಚ್‌ಸಿ ಮಹಾದೇವಪ್ಪ ಕೂಡ ಆಕಾಂಕ್ಷಿಯಾಗಿದ್ದರು. ಕೊನೆಗೆ ಸ್ವತಃ ತಾವೇ ರೇಸ್‌ನಿಂದ ಹಿಂದೆ ಸರಿದರು.

ನಂಜನಗೂಡಿನಲ್ಲಿ ಇತ್ತೀಚೆಗೆ ನಡೆದ ಧ್ರುವನಾರಾಯಣ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಮಾತನಾಡುವಾಗ ದರ್ಶನ್‌ ನಮ್ಮ ಹುಡುಗ. ಅವನಿಗೆ ಟಿಕೆಟ್‌ ನಾನು ಕೊಡಿಸಿಲ್ಲ. ಸಿದ್ದರಾಮಯ್ಯ ಅವರು ಕೊಡಿಸಿಲ್ಲ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೂ ಕೊಡಿಸಿಲ್ಲ. ಬದಲಿಗೆ ನೀವು(ಜನರು) ಕೊಡಿಸಿದ್ದೀರಿ. ಹೀಗಾಗಿ ನೀವೇ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದ್ದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ್‌ ಅವರು ಕೆಪಿಸಿಸಿ ಡಿಕೆ ಶಿವಕುಮಾರ್‌ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ವಿದ್ಯಾರ್ಥಿ ದಿಸೆಯಿಂದಲೇ ಅವರು ಕಾಂಗ್ರೆಸ್‌ನಿಂದ ಗುರುತಿಸಿಕೊಂಡಿದ್ದರು. ಆ ಸಂದರ್ಭದಿಂದಲೂ ಅವರು ಪರಸ್ಪರ ಉತ್ತಮ ಗೆಳೆತನ ಹೊಂದಿದ್ದರು. ಹೀಗಾಗಿ ಧ್ರುವ ಅವರು ಸತ್ತಾಗ ಡಿಕೆಶಿ ತನ್ನ ಸ್ವತಃ ಸಂಬಂಧಿಕರನ್ನು ಕಳೆದುಕೊಂಡಂತೆ ಗಳಗಳನೆ ಅತ್ತಿದ್ದರು.

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮುದಾಯ ಮತದಾರರ ಸಂಖ್ಯೆ ಹೆಚ್ಚಿದೆ. ಈಗ ಇದೇ ವೀರಶೈವ ಲಿಂಗಾಯತ ಸಮುದಾಯದ ಶಾಮನೂರು ಶಿವಶಂಕರಪ್ಪ ಅವರು ದರ್ಶನ್‌ಗೆ ಬೆಂಬಲ ಸೂಚಿಸಿರುವುದರಿಂದ ದರ್ಶನ್‌ಗೆ ಹೆಚ್ಚಿನ ಬಲ ಬಂದಿದೆ. ಇದಲ್ಲದೆ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್‌ ಅವರೂ ಕೂಡ ದರ್ಶನ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಧ್ರುವನಾರಾಯಣ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ನನಗೆ 25 ವರ್ಷಗಳಿಂದ ಧ್ರುವ ಅವರು ಗೊತ್ತು.

ನನಗೆ ಲೋಕಸಭೆಯಲ್ಲಿ ಅನೇಕ ಕಾರ್ಯಚಟುವಟಿಕೆಯನ್ನು ಹೇಳಿಕೊಟ್ಟ ಗುರು ಧ್ರುವನಾರಾಯಣ್‌ ಅವರು. ಅಲ್ಲದೆ ಎಲ್ಲೇ ಹೋದರು ಪ್ರತಿ ಹೆಜ್ಜೆಗೂ ಮಾರ್ಗದರ್ಶನವನ್ನು ನೀಡಿದರು. ತಾನು ಮಾಡಿದ ಕೆಲಸಗಳನ್ನು ಹೆಮ್ಮೆಯಿಂದ ಹೇಳಿ ಕೆಲಸಸದಿಂದಲೇ ಗುರುತಿಸಿಕೊಂಡಿದ್ದ ನಾಯಕರು ಅವರು ಎಂದು ತಿಳಿಸಿದ್ದರು.

ಧ್ರುವನಾರಾಯಣ್‌ಗೆ ಮಗನನ್ನು ರಾಜಕೀಯಕ್ಕೆ ತರುವುದರ ಬಗ್ಗೆ ಎಂದೂ ಬಯಸಿದವರಲ್ಲ, ಇವತ್ತು ಅವರ ಆದರ್ಶ ಮುಂದುವರೆಸಲು ಕಷ್ಟನೋ ಸುಖನೋ ದರ್ಶನ್‌ ಅವರು ನಿಮ್ಮ ಆಸೆಯಂತೆ ಜನರೊಗೋಸ್ಕರ ನಿಮ್ಮ ಮಡಿಲಿಗೆ ಬಂದು ಬೀಳುತ್ತಿದ್ದಾನೆ. ಅವನಿಗೆ ತಂದೆ ತಾಯಿ ನೀವೇ ಅವರನ್ನು ಉಳಿಸಿಕೊಳ್ಳುವ ಕೆಲಸ ನೀವೇ ಮಾಡಬೇಕಾಗಿದೆ. ದರ್ಶನ್‌ ಕೂಡ ಅದೇ ಮಾರ್ಗದಲ್ಲಿ ನಡೆಯುತ್ತಾನೆ. ಅವನಿಗೆ ನಿಮ್ಮ ಬೆಂಬಲ ಬೇಕಾಗಿದೆ ಎಂದು ಮತಯಾಚಿಸಿದರು.