ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಡಿಕ್ಕಿಯೊಡೆದು 500 ಮೀ.ವರೆಗೆ ಎಳೆದೊಯ್ದ ಕಾರು, ಸಂತ್ರಸ್ತ ಸಾವು

ನೋಯ್ಡಾ: ಕಾರೊಂದು ಡಿಕ್ಕಿ ಹೊಡೆದು ಸುಮಾರು 500 ಮೀಟರ್ ವರೆಗೆ ಎಳೆದೊಯ್ದ ಪರಿಣಾಮ ಡೆಲಿವರಿ ಏಜೆಂಟ್ ಸಾವನ್ನಪ್ಪಿರುವ ಘಟನೆ ನೋಯ್ಡಾದಲ್ಲಿ ಭಾನುವಾರ ನಡೆದಿದೆ.
ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ ಕೌಶಲ್ ಹೊಸ ವರ್ಷದ ರಾತ್ರಿ ಆರ್ಡರ್ ಡೆಲಿವರಿಗೆಂದು ಹೊರಟಿದ್ದಾಗ ನೋಯ್ಡಾ ಸೆಕ್ಟರ್ 14ರ ಫ್ಲೈಓವರ್ ಬಳಿ ಕಾರೊಂದು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸುಮಾರು 500 ಮೀಟರ್ ವರೆಗೆ ಎಳೆದೊಯ್ದಿದೆ.
ಭಾನುವಾರ ಮಧ್ಯರಾತ್ರಿ 1 ಗಂಟೆಗೆ ಕೌಶಲ್ ಅವರ ಸಹೋದರ ಅಮಿತ್ ಕರೆ ಮಾಡಿದಾಗ ದಾರಿಹೋಕರೊಬ್ಬರು ಕರೆ ಸ್ವೀಕರಿಸಿ ಅಪಘಾತದ ಬಗ್ಗೆ ತಿಳಿಸಿದ್ದಾರೆ. ಅಮಿತ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.