ಹಣದುಬ್ಬರದಿಂದ ಕಂಗೆಟ್ಟಿರುವ ಜನರನ್ನು ಅವಮಾನಿಸಬೇಡಿ

ನವದೆಹಲಿ: 'ಹಣದುಬ್ಬರದಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಉಚಿತ ಕೊಡುಗೆ ಸಂಸ್ಕೃತಿಯನ್ನು ಟೀಕಿಸುವ ಮೂಲಕ ಅವರನ್ನು ಅವಮಾನಿಸಬೇಡಿ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
'ರಾಜಕಾರಣಿಗಳು ಬೇಕಾದಷ್ಟು ಸೌಲಭ್ಯಗಳನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಬ್ಯಾಂಕ್‌ಗಳು ಶ್ರೀಮಂತ ವ್ಯಕ್ತಿಗಳಿಗೆ ಸಾಲ ಒದಗಿಸುತ್ತಿವೆ. ಹೀಗಿರುವಾಗ ನಾಗರಿಕರು ಶಿಕ್ಷಣ, ಚಿಕಿತ್ಸೆ, ಔಷಧ ಹಾಗೂ ವಿದ್ಯುತ್ ಅನ್ನು ಏಕೆ ಉಚಿತವಾಗಿ ಪಡೆಯಬಾರದು. ಉಚಿತ ಕೊಡುಗೆ ಸಂಸ್ಕೃತಿ ಎಂದು ಪದೇ ಪದೇ ಉಲ್ಲೇಖಿಸುವ ಮೂಲಕ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಅವಮಾನಿಸಬೇಡಿ' ಎಂದು ಕೇಜ್ರಿವಾಲ್ ಭಾನುವಾರ ಟ್ವೀಟ್ ಮಾಡಿದ್ದಾರೆ.
ಮಧ್ಯಪ್ರದೇಶದ ಸತನಾ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾಗಿರುವ 4.51 ಲಕ್ಷ ಮನೆಗಳನ್ನು ಶನಿವಾರ ಫಲಾನುಭವಿಗಳಿಗೆ ವಿತರಿಸಿ ವರ್ಚುವಲ್ ವೇದಿಕೆಯಲ್ಲಿ ಮಾತನಾಡಿದ್ದ ಮೋದಿ ಉಚಿತ ಕೊಡುಗೆ ಸಂಸ್ಕೃತಿಯನ್ನು ಟೀಕಿಸಿದ್ದರು. ಈ ಸುದ್ದಿಯನ್ನು ಕೇಜ್ರಿವಾಲ್ ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.