ಚಿಕ್ಕಬಳ್ಳಾಪುರ: ದೇವಸ್ಥಾನದಲ್ಲಿ ನಿಗೂಢ ಸಾವು ಪ್ರಕರಣ; ಸಾಯುವುದಕ್ಕೂ ಮುನ್ನ ಮಾಡಿರುವ ವಿಡಿಯೋ ವೈರಲ್
ಚಿಕ್ಕಬಳ್ಳಾಪುರ: ಇದೇ ತಿಂಗಳ 12 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿ ಗ್ರಾಮದಲ್ಲಿರುವ ಕೋಳಾಲಮ್ಮದೇವಿ ದೇವಸ್ಥಾನದಲ್ಲಿ ಶವವಾಗಿ ಪತ್ತೆಯಾಗಿದ್ದ ಶ್ರೀಧರ್ ಹಾಗೂ ಲಕ್ಷ್ಮಿಪತಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಡಿಯೋವೊಂದು ವೈರಲ್( Video viral) ಆಗಿದೆ. ಸಾವಿಗೂ ಮುನ್ನ ಮೃತರು ಮಾಡಿದ ವಿಡಿಯೋದಲ್ಲಿ ತಮ್ಮ ಸಾವಿಗೆ ತಾವೇ ಕಾರಣ, ಭಕ್ತರು ಕ್ಷಮಿಸುವಂತೆ ಹೇಳಿದ್ದಾರೆ. ಅಲ್ಲದೇ ಶವ ಸಂಸ್ಕಾರದ ವೇಳೆ ತಾನು ಧರಿಸಿರುವ ಕಾಲುಂಗರ ಹಾಗೂ ಮೂಗುನತ್ತು ಬಿಚ್ಚದಂತೆ ಶ್ರೀಧರ್ ಮನವಿ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ದೇವಸ್ಥಾನದಲ್ಲಿ ಧರ್ಮದರ್ಶಿಯಾಗಿದ್ದ ಶ್ರೀಧರ್ ಮತ್ತು ಅರ್ಚಕರಾಗಿದ್ದ ಲಕ್ಷ್ಮಿಪತಿ ಜತೆಗೆ ಅನಿಲ್ ವಿಡಿಯೋ ಲಭ್ಯವಾಗಿದೆ. ಶ್ರೀಧರ್ ಜೊತೆ ತನಗೆ ಸಲಿಂಗ ಕಾಮವೆಂದು ಆರೋಪ ಮಾಡಿದ್ದಾರೆ ಎಂದು ವಿಡಿಯೋದಲ್ಲಿ ಅನಿಲ್ ಪ್ರಸ್ತಾಪಿಸಿದ್ದಾರೆ. ಆದರೆ ಶ್ರೀಧರ್ ಹಾಗೂ ಲಕ್ಷ್ಮಿಪತಿ ಸಾವಿನ ನಂತರ ಅನಿಲ್ ನಾಪತ್ತೆಯಾಗಿದ್ದಾರೆ.