ಅತಿಕ್ರಮ ತೆರವುಗೊಳಿಸಿ ರಾಜಕಾಲುವೆಗಳ ಅಭಿವೃದ್ಧಿ : ಸಿಎಂ

ಅತಿಕ್ರಮ ತೆರವುಗೊಳಿಸಿ ರಾಜಕಾಲುವೆಗಳ ಅಭಿವೃದ್ಧಿ : ಸಿಎಂ

ಬೆಂಗಳೂರು, ಸೆ. ೧೩- ಮಳೆಯಿಂದ ಬೆಂಗಳೂರು ಜಲಾವೃತವಾಗುವುದನ್ನು ತಪ್ಪಿಸಲು ರಾಜಕಾಲುವೆಗಳ ಅಭಿವೃದ್ಧಿಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದ್ದು, ಕೆರೆಗಳಿಗೆ ಸ್ಟ್ಲೂಯೀಸ್ ಗೇಟ್‌ಗಳನ್ನು ಅಳವಡಿಸಲು ಸರ್ಕಾರ ಆದೇಶಿಸಿದ್ದು, ರಾಜಕಾಲುವೆಗಳ ಮಾಸ್ಟರ್ ಪ್ಲಾನ್‌ನ್ನು ಮತ್ತೆ ಪರಿಷ್ಕರಿಸಿ ರಾಜಕಾಲುವೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೃಷ್ಣ ಭೈರೇಗೌಡ ಅವರ ಪ್ರಶ್ನೆಗೆ ಸುದೀರ್ಘ ಉತ್ತರ ನೀಡಿದ ಮುಖ್ಯಮಂತ್ರಿಗಳು, ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ಅತಿಕ್ರಮಣ ಮಾಡಿ ಅಡ್ಡಿಯಾಗಿವೆ. ಮೊದಲು ಕಟ್ಟಡ ಅತಿಕ್ರಮಣಗಳನ್ನು ತೆರವುಗೊಳಿಸಿ ರಾಜಕಾಲುವೆಗಳ ಅಭಿವೃದ್ಧಿ ಮಾಡಬೇಕಾಗುತ್ತದೆ. ರಾಜಕಾಲುವೆ ಅಭಿವೃದ್ಧಿ ಸರಳವಲ್ಲ. ಸಂಕೀರ್ಣತೆಯಿಂದ ಕೂಡಿದೆ ಎಂದರು.
ಬೆಂಗಳೂರಿನಲ್ಲಿ ಮಳೆಯಾದರೆ ೨ ವಲಯಗಳಲ್ಲಿ ಅದರಲ್ಲೂ ಮಹದೇವಪುರ ವಲಯದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹಾಗಾಗಿ ಈಗಿನ ಮಳೆಗೆ ತಕ್ಕಂತೆ ರಾಜಕಾಲುವೆಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಈಗಿನ ದೊಡ್ಡ ಮಳೆಗೆ ರಾಜಕಾಲುವೆಗಳು ಉಕ್ಕಿ ಹರಿಯುವ ಸಾಧ್ಯತೆಗಳಿವೆ. ಇದಕ್ಕೆಲ್ಲ ಸಮಯ ಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಆಗಿದ್ದ ಕಾಮಗಾರಿಗಳು ಈಗ ನಡೆಯುತ್ತಿವೆ. ಸಂಪೂರ್ಣ ರಾಜಕಾಲುವೆಗಳ ಅಭಿವೃದ್ಧಿಗೆ ಒಂದೂವರೆ ವರ್ಷವಾದರೂ ಬೇಕಾಗುತ್ತದೆ ಎಂದರು.
ಎಲ್ಲೆಲ್ಲಿ ಅತಿಕ್ರಮಣ ಆಗಿದೆಯೇ ಅಲ್ಲೆಲ್ಲಾ ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದೇವೆ. ರಾಜಕಾಲುವೆಗಳ ಅಭಿವೃದ್ಧಿಗಾಗಿಯೇ ೧೫೦೦ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಒದಗಿಸಿದ್ದೆ. ಈಗ ಹೆಚ್ಚುವರಿಯಾಗಿ ೩೦೦ ಕೋಟಿ ರೂ.ಗಳನ್ನು ನೀಡಿದ್ದೇನೆ. ಒಟ್ಟಾರೆ ೧೮೦೦ ಕೋಟಿ ರೂ.ಗಳನ್ನು ರಾಜಕಾಲುವೆ ಅಭಿವೃದ್ಧಿಪಡಿಸಲು ಸರ್ಕಾರ ಒದಗಿಸಿದೆ ಎಂದರು.
ಬೆಂಗಳೂರಿನಲ್ಲಿ ಒಟ್ಟು ೮೫೦ ಕಿಲೋ ಮೀಟರ್ ಉದ್ದದ ರಾಜಕಾಲುವೆ ಇದ್ದು, ಇದನ್ನು ಮುಂದಿನ ೨ ವರ್ಷದಲ್ಲಿ ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಹಣ ಒದಗಿಸುತ್ತೇನೆ. ಕಾಮಗಾರಿಗಳು ನಿಲ್ಲದಂತೆ ನಿರಂತರವಾಗಿ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದರು.ಮಳೆಯಿಂದ ಬೆಂಗಳೂರಿನ ಕೆರೆಗಳು ತುಂಬಿ ಹರಿದು ಸಮಸ್ಯೆಗಳಾಗಿವೆ. ಮಹದೇವಪುರ ವಲಯದಲ್ಲೆ ೬೯ ಕೆರೆಗಳಿದ್ದು, ಈ ಕೆರೆಗಳು ತುಂಬಿದ್ದರಿಂದ ಆ ಭಾಗದಲ್ಲಿ ಜಲಾವೃತ ಸಮಸ್ಯೆಗಳಾದವು. ಹಾಗಾಗಿ ಮಹದೇವಪುರ ವಲಯದ ಕೆರೆಗಳು ಸೇರಿದಂತೆ ಬೆಂಗಳೂರಿನ ೧೬೦ ಕೆರೆಗಳಿಗೆ ಸ್ಲೂಯೀಸ್ ಗೇಟ್ ಅಳವಡಿಸಲು ಆದೇಶ ಮಾಡಿದ್ದೇನೆ. ಇದರಿಂದ ಕೆರೆಗಳ ನೀರು ಹರಿಯುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.ರಾಜಕಾಲುವೆಗಳ ಅಭಿವೃದ್ದಿಗೆ ಸರ್ಕಾರ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಟೆಂಡರ್ ಪ್ರಗತಿಯಲ್ಲಿದೆ. ಕಳೆದ ೩ ವರ್ಷಗಳಲ್ಲಿ ೩೩.೧೪ ಕಿ.ಮೀ. ಉದ್ದದ ಬಾಕ್ಸ್ ಡ್ರೈನ್ ಹಾಗೂ ೩೦.೩೧ ಕಿ.ಮೀ. ಉದ್ದ ಯೂಶೇಪ್ ಡ್ರೈನ್‌ನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಉಳಿದ ೪೯೦ ಕಿ.ಮೀ. ಉದ್ದ ಪ್ರಥಮ ಹಾಗೂ ದ್ವಿತೀಯ ಹಂತದ ರಾಜಕಾಲುವೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದರು.
ಈ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.ಮುಖ್ಯಮಂತ್ರಿ ಅಮೃತ ನಗರ ಯೋಜನೆಯಲ್ಲೂ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಅನುದಾನ ನೀಡಲಾಗಿದ್ದು, ಈ ಅನುದಾನದಲ್ಲೂ ಸ್ವಲ್ಪ ಹಣವನ್ನು ರಾಜಕಾಲುವೆಗಳ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಇದಕ್ಕೂ ಮೊದಲು ಪ್ರಶ್ನೆ ಕೇಳಿದ ಕೃಷ್ಣ ಭೈರೇಗೌಡ ಅವರು ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಸಮಸ್ಯೆಗಳಿಂದ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆಯಾಗಿದೆ. ಹಾಗಾಗಿ ಸರ್ಕಾರ ಬೇರೆಯವರನ್ನು ದೂಷಣೆ ಮಾಡದೆ ರಾಜಕಾಲುವೆಗಳ ಅಭಿವೃದ್ಧಿಗೆ ನಿರಂತರ ಕಾರ್ಯಕ್ರಮ ರೂಪಿಸಬೇಕು. ರಾಜಕಾಲುವೆಗಳ ಅಭಿವೃದ್ಧಿಯಾದರೆ ಶೇ. ೮೦ ರಷ್ಟು ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದ್ದರು.