ಯುಎಬಿಎ ನ್ಯಾಯಮಂಡಳಿ ಅಧ್ಯಕ್ಷರಾಗಿ ನ್ಯಾ. ದಿನೇಶ್ ನೇಮಕ

ನವದೆಹಲಿ, ಅ. ೬- ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟಲು) ನ್ಯಾಯ ಮಂಡಳಿಯ ಅಧ್ಯಕ್ಷರಾಗಿ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಇತ್ತೀಚೆಗಷ್ಟೆ ಪಾಪ್ಯೂಲರ್ ಫ್ರೆಂಟ್ ಆಫ್ ಇಂಡಿಯಾ ಮತ್ತು ಅದರ ಅಂಗ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳ ಮೇಲೆ ಹೇರಲಾಗಿರುವ ನಿಷೇಧವನ್ನು ಪರಿಶೀಲಿಸುವ ಸಲುವಾಗಿ ಕೇಂದ್ರ ಸರ್ಕಾರ ಅಧ್ಯಕ್ಷರನ್ನು ನೇಮಕ ಮಾಡಿದೆ.
ಪಿಎಫ್‌ಐ ಮತ್ತು ಇತರ ಅಂಗ ಸಂಸ್ಥೆಗಳನ್ನು ೫ ವರ್ಷಗಳ ಕಾಲ ನಿಷೇಧಿಸಿ ನಂತರ ಸಂಘಟನೆಯ ಕಚೇರಿಗಳು ಮತ್ತು ಪದಾಧಿಕಾರಿಗಳ ನಿವಾಸಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ, ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ದಾಖಲೆಗಳು ಪತ್ತೆಯಾಗಿದ್ದವು.
ಈ ಸಂಬಂಧ ನ್ಯಾಯಮೂರ್ತಿ ದಿನೇಶ್‌ಕುಮಾರ್ ಶರ್ಮ ಅವರನ್ನು ನ್ಯಾಯಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಪಿಎಫ್‌ಐ, ಎಸ್‌ಡಿಪಿಐ, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್, ನ್ಯಾಷನಲ್ ಕಾನ್ಫಿಡರೇಷನ್ ಆಫ್ ವುಮನ್ ರೈಟ್ಸ್ ಆರ್ಗೇನೈಸೇಷನ್, ನ್ಯಾಷನಲ್ ವುಮನ್ ಫ್ರೆಂಟ್ ಸೇರಿದಂತೆ ಅದರ ಅಂಗ ಸಂಸ್ಥೆಗಳು ಕಾನೂನು ಬಾಹಿರ ಸಂಘವೆಂದು ಘೋಷಿಸಲು, ಅವುಗಳ ಬಗ್ಗೆ ಸಾಕಷ್ಟು ಕಾರಣಗಳನ್ನು ದಿನೇಶ್‌ಕುಮಾರ್ ಶರ್ಮ ಪರಿಶೀಲಿಸಲಿದ್ದಾರೆ.
ಈ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯಕ್ಕೂ ಕೇಂದ್ರ ಸರ್ಕಾರ ಪತ್ರ ರವಾನಿಸಿದೆ.
ದಾಳಿ ನಡೆಸಿದ ವೇಳೆ ಪಿಎಫ್‌ಐ ವಿದೇಶದಿಂದ ಹವಾಲಾ ಮುಖಾಂತರ ಹಣ ರವಾನಿಸಿರುವ ವಿಚಾರ ಪತ್ತೆಯಾಗಿತ್ತು.
ಈ ಎಲ್ಲ ಬೆಳವಣಿಗೆಗಳ ನಡುವೆ ಪಿಎಫ್‌ಐ ನಿಷೇಧದ ಬಗ್ಗೆ ಸಮಾಲೋಚನೆ ನಡೆಸಿ ಪರಿಶೀಲನೆ ನಡೆಸಲು ಯುಎಬಿಎ ನ್ಯಾಯಮಂಡಳಿಯ ಅಧ್ಯಕ್ಷರನ್ನಾಗಿ ದಿನೇಶ್‌ಕುಮಾರ್ ಶರ್ಮ ಅವರನ್ನು ನೇಮಕ ಮಾಡಿದೆ.