ರೈತ ಸಮುದಾಯಕ್ಕೆ ಸಿಹಿಸುದ್ದಿ : 14 ಲಕ್ಷ ರೈತರಿಗೆ 926 ಕೋಟಿ ರೂ. ಪರಿಹಾರ ಬಿಡುಗಡೆ: ಸಚಿವ ಆರ್.ಅಶೋಕ್

ರೈತ ಸಮುದಾಯಕ್ಕೆ ಸಿಹಿಸುದ್ದಿ : 14 ಲಕ್ಷ ರೈತರಿಗೆ 926 ಕೋಟಿ ರೂ. ಪರಿಹಾರ ಬಿಡುಗಡೆ: ಸಚಿವ ಆರ್.ಅಶೋಕ್

ಬೆಳಗಾವಿ : ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದ 14 ಲಕ್ಷ ರೈತರ ಖಾತೆಗೆ 926.43 ಕೋಟಿ ರೂ.ಪರಿಹಾರ ಧನವನ್ನು ತಿಂಗಳ ಒಳಗಾಗಿ ಜಮಾ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ವಿಧಾನಸಭೆಯಲ್ಲಿ ತಿಳಿಸಿದರು. ಸದನದಲ್ಲಿ ಅತಿವೃಷ್ಟಿ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವರು, ಅತಿವೃಷ್ಟಿಯಿಂದ 12.52 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಹಾನಿ ಸಂಭವಿಸಿದ್ದು, ತಕ್ಷಣ ಜಂಟಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಪರಿಹಾರವನ್ನು ಒದಗಿಸಲಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಮೊದಲ ಬಾರಿ 841.57 ಕೋಟಿ ರೂ. ಮತ್ತು ಎರಡನೇ ಬಾರಿ 128.92 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಎರಡು ಬಾರಿ ಕೇಂದ್ರ ತಂಡ ಆಗಮಿಸಿ ಸಮೀಕ್ಷೆ ಕಾರ್ಯ ನಡೆಸಿದೆ ಎಂದು ಹೇಳಿದರು.

ಅತಿವೃಷ್ಟಿಯಿಂದ 23,716 ಮನೆಗಳಿಗೆ ಹಾನಿ ಸಂಭವಿಸಿದ್ದು, 332.87 ಕೋಟಿ ರೂ. ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಸಂಪೂರ್ಣ ಹಾನಿಗೀಡಾದ ಮನೆಗಳಿಗೆ 5ಲಕ್ಷ ರೂ, ತೀವ್ರ ಹಾನಿಗೀಡಾದ ಮನೆಗಳಿಗೆ 3ಲಕ್ಷ ರೂ. ಹಾಗೂ ಭಾಗಶಃ ಹಾನಿಗೀಡಾದ ಮನೆಗಳಿಗೆ 50ಸಾವಿರ ರೂ. ಪರಿಹಾರ ಒದಗಿಸಲಾಗುತ್ತಿದೆ.

ಕೊಡಗಿನಲ್ಲಿ ಹಾನಿಗೀಡಾದ ಕಾಫಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 18ಸಾವಿರ ರೂ.ನಂತೆ ಒಟ್ಟು 38.80ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಅತಿವೃಷ್ಟಿಯಿಂದ 62 ಜೀವ ಹಾನಿ ಸಂಭವಿಸಿದ್ದು, 945 ಜಾನುವಾರುಗಳು ಸಾವಿಗೀಡಾಗಿವೆ. 54,716 ಮನೆ, 3306 ಸೇತುವೆಗಳಿಗೆ, 995 ಸಣ್ಣ ನೀರಾವರಿ ಕೆರೆಗಳಿಗೆ ಹಾನಿ ಸಂಭವಿಸಿದೆ. ರಾಜ್ಯ ಸರ್ಕಾರ ತಕ್ಷಣ ಸಂತ್ರಸ್ತರ ನೆರವಿಗೆ ಧಾವಿಸಿ ಪರಿಹಾರವನ್ನು ಪ್ರಾಮಾಣಿಕವಾಗಿ ಒದಗಿಸಿದೆ. ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಉತ್ತಮ ಊಟ ಉಪಾಹಾರದ ವ್ಯವಸ್ಥೆಯನ್ನು ಸರ್ಕಾರ ಸ್ಥಳೀಯವಾಗಿ ಕೈಗೊಂಡಿದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ 15ನೇ ಹಣಕಾಸು ಯೋಜನೆಯಡಿ 5270 ಕೋಟಿ ರೂ. ಬಿಡುಗಡೆ ಮಾಡುತ್ತಿದೆ. ಹೆಚ್ಚಿನ ಪರಿಹಾರ ಕೋರಿ ಮುಖ್ಯಮಂತ್ರಿ ಅವರು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದು ಸಚಿವರು ತಿಳಿಸಿದರು.