ಅರವಿಂದ ಕೇಜ್ರಿವಾಲ್-ಉದ್ಧವ್ ಠಾಕ್ರೆ ಭೇಟಿ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ
ಮುಂಬೈ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಬಾಂದ್ರಾದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು.
ಠಾಕ್ರೆ ನಿವಾಸ 'ಮಾತೋಶ್ರೀ'ಗೆ ಭೇಟಿ ನೀಡಿದ್ದ ಕೇಜ್ರಿವಾಲ್ ಅವರೊಂದಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಅವರೂ ಇದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ, 'ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಠಾಕ್ರೆ ಗೆಲ್ಲಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಎಪಿಯು ಉದ್ಧವ್ ಠಾಕ್ರೆ ಅವರ ಶಿವಸೇನಾದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್, 'ಚುನಾವಣೆ ಘೋಷಣೆಯಾದಾಗ ನಿಮಗೇ ತಿಳಿಯುತ್ತದೆ' ಎಂದು ಹೇಳಿದರು. ದೇಶವನ್ನು ಹೇಗೆ ಬಲಪಡಿಸಬೇಕು ಎಂಬುದರ ಸುತ್ತ ಚರ್ಚೆ ನಡೆಯುತ್ತಿದೆ ಎಂದು ಠಾಕ್ರೆ ಹೇಳಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಚುನಾವಣಾ ಆಯೋಗವು ಇತ್ತೀಚೆಗೆ 'ಶಿವಸೇನಾ' ಹೆಸರು ಮತ್ತು 'ಬಿಲ್ಲು-ಬಾಣ'ದ ಗುರುತು ನೀಡಿದ್ದು, ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆಯುಂಟಾಗಿದೆ. ಈ ಮಧ್ಯೆ ನಡೆದಿರುವ ಭೇಟಿಯು ಮಹಾರಾಷ್ಟ್ರ ರಾಜಕೀಯದಲ್ಲಿ ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ.
ಕಳೆದ ವರ್ಷ ಜೂನ್‌ನಲ್ಲಿ ಶಿಂದೆಯವರ ಬಂಡಾಯದಿಂದಾಗಿ ಶಿವಸೇನಾ ವಿಭಜನೆಗೊಂಡಿತ್ತು. ಠಾಕ್ರೆಯವರ ಮಹಾ ವಿಕಾಸ ಅಘಾಡಿ ಸರ್ಕಾರ ಪತನವಾಗಿತ್ತು. ಭಾರತೀಯ ಜನತಾ ಪಕ್ಷದ ಬೆಂಬಲದಿಂದ ಶಿಂದೆ ಸಿಎಂ ಆದರು.
ಈ ಮಧ್ಯೆ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಎಎಪಿ ಕೂಡ ಹೇಳಿದೆ.
ದೇಶದ ಶ್ರೀಮಂತ ನಾಗರಿಕ ಸಂಸ್ಥೆಯಾದ ಬೃಹನ್‌ಮುಂಬೈ ಪಾಲಿಕೆಯಲ್ಲಿ ಅವಿಭಜಿತ ಶಿವಸೇನಾ ಹಲವಾರು ವರ್ಷಗಳಿಂದ ಆಡಳಿತ ನಡೆಸುತ್ತಾ ಬಂದಿದೆ. ಎಎಪಿ ಇತ್ತೀಚೆಗೆ ಬಿಜೆಪಿಯಿಂದ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ಅನ್ನು ಕಸಿದುಕೊಂಡಿದೆ.