ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಸಂಘಟನೆಗಳ ಪ್ರತಿಭಟನೆ | Chikkaballapur |
ಚಿಕ್ಕಬಳ್ಳಾಪುರ ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವ ನಿರ್ಧಾರ ಕೈಬಿಡಬೇಕು. ಛಳಿಗಾಲದ ಅಧಿವೇಶನದಲ್ಲಿ ಸಂಸತ್ ಅಂಗೀಕಾರ ಮಾಡುವುದಾಗಿ ಬಿಜೆಪಿ ಸರ್ಕಾರ ಹೇಳಿದೆ. ಈ ತೀರ್ಮಾನದಿಂದ ದೇಶದ ರೈತರು ಸಣ್ಣ ಪುಟ್ಟ ಕೈಗಾರಿಕೆಗಳವರು ನಷ್ಟಕ್ಕೊಳಗಾಗುತ್ತಾರೆ. ಕೂಡಲೇ ಈ ನಿರ್ಧಾರ ಹಿಂತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣಗೊಳಿಸಿ ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡುವ ನಿರ್ಧಾರ ಕೈಬಿಡಬೇಕೆಂದು ಇಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ರೈತಸಂಘ ಪ್ರತಿಭಟನೆ ಹಮ್ಮಿಕೊಂಡಿತ್ತು. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ರಾಜ್ಯ ರೈತಸಂಘದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ಮಾತ್ರ ತೊಂದರೆ ಆಗೋದಿಲ್ಲ, ಸಣ್ಣ ಪುಟ್ಟ ಕೈಗಾರಿಕೆಗಳು, ಸೇವಾ ಸಂಸ್ಥೆಗಳು, ಸಣ್ಣ ಸಣ್ಣ ವ್ಯಾಪಾರಿಗಳಿಗೂ ತೊಂದರೆಯಾಗಲಿದೆ. ಕೂಡಲೇ ವಿದ್ಯುತ್ ಖಾಸಗೀಕರಣ ನಿರ್ಧಾರ ಕೈ ಬಿಡದಿದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ಅನಿವಾರ್ಯವೆಂದು ಎಚ್ಚರಿಕೆ ನೀಡದರು. ರೈತ ಸಂಘದ ಹೋರಾಟಕ್ಕೆ ಕರವೇ ಸಿಂಹಸೇನೆ ಕಾರ್ಯಕರ್ತರು ಬೆಂಬಲ ನೀಡಿದರು. ಜಿಲ್ಲಾದ್ಯಕ್ಷ ಹಳೇಗುಡಿಬಂಡೆ ರಾಮು,ಮಹಿಳಾ ಅಧ್ಯಕ್ಷೆ ಉಮಾದೇವಿ ತಾದೂರು ಮಂಜುನಾಥ್,ಉಲ್ಲೂರುಪೇಟೆ ನಾರಾಯಣಸ್ವಾಮಿ ಇತರರು ಪಾಲ್ಗೊಂಡಿದ್ದರು.