ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿ 6ಜನರ ಸಾವು

ಕಾರವಾರ

ಜಲಪಾತದ ನೀರಿನಲ್ಲಿ ಮುಳುಗಿ ನಾಲ್ವರು ಮಹಿಳೆಯರು ಸೇರಿದಂತೆ 6 ಜನರು ಸಾವನ್ನಪ್ಪಿದ ಘಟನೆ ರವಿವಾರ ಮಧ್ಯಾಹ್ನ ಕಾರವಾರ ಜಿಲ್ಲೆಯಲ್ಲಿ ಜರುಗಿದೆ. ಕಾರವಾರ ಬಳಿಯ ನಾಗರಮಡಿ ಜಲಪಾತ ವೀಕ್ಷಿಸಲೆಂದು ಗೋವಾದಿಂದ ಗುಂಪು ಗುಂಪುಗಳಲ್ಲಿ ಬಂದಿದ್ದ 40 ಪ್ರವಾಸಿಗರ ಪೈಕಿ ಒಂದು ಗುಂಪಿನ ನಾಲ್ವರು ಮಹಿಳೆಯರು, ಓರ್ವ ಪುರುಷ ಹಾಗೂ ಮತ್ತೊಂದು ಗುಂಪಿನ ಓರ್ವ ಪುರುಷ ನೀರಿನಲ್ಲಿ ಕೊಚ್ಚಿ  ಹೋಗಿ ಸಾವನ್ನಪ್ಪಿದ್ದಾರೆ. ಪ್ರವಾಸಿಗರು ಜಲಪಾತದ ಮಧ್ಯದಲ್ಲಿ ನಿಂತಿದ್ದ ಸಮಯದಲ್ಲಿ ನೀರಿನ ಪ್ರವಾಹ ಹೆಚ್ಚಾಗಿದ್ದೆ ದುರಂತಕ್ಕೆ ಕಾರಣ ಎನ್ನಲಾಗಿದೆ.  ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಲಪಾತದಲ್ಲಿ ನೀರಿನ ಪ್ರವಾಹ ಹೆಚ್ಚಾದ ಕೂಡಲೇ ಹಲವರು ಹೊರಕ್ಕೆ ಓಡಿ ಬಂದು ಪಾರಾಗಿದ್ದಾರೆ, ಆದ್ರೆ, ಜಲಪಾತದ ದಡಕ್ಕೆ ಬರಲಾಗದ 4 ಮಹಿಳೆಯರು, 2 ಪುರುಷರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರಿಂದ ಸಾವನ್ನಪ್ಪುವಂತಾಗಿದೆ. ಘಟನೆಯ ಬಗ್ಗೆ ಪ್ರವಾಸಿಗನೋರ್ವ ಮಾಡಿದ ವಿಡಿಯೋದಲ್ಲಿ ಇದು ದಾಖಲಾಗಿದೆ. ಕಾರವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.