ಬಾಲ್ಕನಿಯಿಂದ ಬಿದ್ದ ಬಾಲಕಿಯ ಬ್ರೈನ್ ಡೆಡ್: ಮಗಳ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(AIIMS)ನಲ್ಲಿ ಬ್ರೈನ್ ಡೆಡ್ ಎಂದು ಘೋಷಿಸಲ್ಪಟ್ಟ 18 ತಿಂಗಳ ಬಾಲಕಿಯ ಕುಟುಂಬವು ಆಕೆ ದೇಹದ ಅಂಗಗಳನ್ನು ದಾನ ಮಾಡಿದ್ದು, ಇಬ್ಬರು ರೋಗಿಗಳಿಗೆ ಹೊಸ ಜೀವವನ್ನು ನೀಡಿದ್ದಾರೆ.
ಹರಿಯಾಣದ ಮೇವಾತ್ ಮೂಲದ ಮಹಿರಾ ನವೆಂಬರ್ 6 ರಂದು ತನ್ನ ಮನೆಯ ಬಾಲ್ಕನಿಯಿಂದ ಬಿದ್ದು, ಮೆದುಳಿಗೆ ತೀವ್ರ ಹಾನಿಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಹೀಗಾಗಿ, ಬಾಲಕಿಯನ್ನು AIIMS ಟ್ರಾಮಾ ಸೆಂಟರ್‌ಗೆ ಸಾಗಿಸಲಾಯಿತು.
ನವೆಂಬರ್ 11 ರ ಬೆಳಿಗ್ಗೆ ವೈದ್ಯರು ಬಾಲಕಿಯ ಬ್ರೈನ್ ಡೆಡ್ ಆಗಿದೆ ಎಂದು ಪೋಷಕರಿಗೆ ತಿಳಿಸಿದರು. ನಂತ್ರ ಬಾಲಕಿಯ ಪೋಷಕರು, ಮಗಳ ದೇಹದ ಅಂಗಗಳನ್ನು ದಾನ ಮಾಡಲು ಮುಂದಾದರು. ಇದರ ಫಲವಾಗಿ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್‌ನಲ್ಲಿ (ಐಎಲ್‌ಬಿಎಸ್) ಆರು ತಿಂಗಳ ಮಗುವಿಗೆ ಯಕೃತ್ತನ್ನು ಕಸಿ ಮಾಡಲಾಗಿದೆ ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಎಐಐಎಂಎಸ್) 17 ವರ್ಷದ ಹುಡುಗನಿಗೆ ಎರಡೂ ಮೂತ್ರಪಿಂಡಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಬಾಲಕಿಯ ಕಾರ್ನಿಯಾಗಳು ಮತ್ತು ಹೃದಯ ಕವಾಟಗಳನ್ನು ನಂತರದ ಬಳಕೆಗಾಗಿ ಸಂರಕ್ಷಿಸಲಾಗಿದೆ ಎಂದು AIIMS ನ ನರಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕ ಡಾ ದೀಪಕ್ ಗುಪ್ತಾ ಪಿಟಿಐಗೆ ತಿಳಿಸಿದರು.