ಬಿಜೆಪಿ ಪರೀಕ್ಷಾರ್ಥ ಪ್ರಯೋಗ; ಮಿಷನ್ ದಕ್ಷಿಣ ಕರ್ನಾಟಕ | ಒಕ್ಕಲಿಗರ ಭದ್ರಕೋಟೆ ಪ್ರವೇಶಕ್ಕೆ ಪ್ರತಿಮೆ ಬಲ

ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನಾ ಬೇರುಗಳನ್ನು ಆಳಕ್ಕಿಳಿಸಿ, ವಿಸ್ತರಿಸಲು ಉದ್ದೇಶಿತ 'ಮಿಷನ್ ದಕ್ಷಿಣ' ಕಾರ್ಯಸೂಚಿಯಡಿ ಪರೀಕ್ಷಾರ್ಥ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ.
ಒಕ್ಕಲಿಗರ ಭದ್ರಕೋಟೆ ಪ್ರವೇಶಿಸುವ ಕಮಲಪಡೆಯ ಉತ್ಸುಕತೆಗೆ ನಾಡಪ್ರಭು ಕೆಂಪೇಗೌಡರ 'ಪ್ರತಿಮೆ ಬಲ'ವೇ ಕಾರಣವೆಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.
ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಲ್ಲ, ಖುದ್ದು ಆಹ್ವಾನಿಸಿಲ್ಲ. ಕಾರ್ಯಕ್ರಮದ ಹಿಂದಿನ ದಿನ ಸಿಎಂ ಪತ್ರ ಬರೆದು, ಮೊಬೈಲ್ ಕರೆ ಮಾಡಿ ಆಹ್ವಾನಿಸಿದ್ದಾರೆ. ಒಕ್ಕಲಿಗರ ಬಾಹುಳ್ಯದ ಹಳೇ ಮೈಸೂರು ಭಾಗದಲ್ಲಿ ಚುನಾವಣಾ ಪೂರ್ವ 'ಟೆಸ್ಟ್ ಟ್ರಯಲ್' ಇದು. ಮೈಮೇಲೆ ಅಪಾಯ ಎಳೆದುಕೊಳ್ಳದಿದ್ದರೆ ಶಕ್ತಿ-ಸಾಮರ್ಥ್ಯ ಗೊತ್ತಾಗುವುದಿಲ್ಲ. ದೊಡ್ಡಬಳ್ಳಾಪುರದಲ್ಲಿ 'ಜನಸ್ಪಂದನ' ಸಮಾವೇಶ ಸೇರಿ ಹಲವು ಚಟುವಟಿಕೆಗಳ ಮೂಲಕ ಜನರ ಮನ ಗೆಲ್ಲುವ ಪ್ರಯತ್ನಗಳು ನಿರಂತರವಾಗಿ ಜಾರಿಯಲ್ಲಿವೆ. ರಾಜಕೀಯವಾಗಿ ಪರೀಕ್ಷೆಗೆ ಒಳಪಡಲೆಂದು ಈ ರಿಸ್ಕ್ಗೆ ಕೈಹಾಕಿದೆ. ಪರೀಕ್ಷಾರ್ಥ ಪ್ರಯೋಗವು ಸಫಲವಾದರೆ ಮುಂದಿನ ಹಾದಿ ಸುಗಮವಾಗಲಿದೆ. ವ್ಯತ್ಯಾಸಗಳಾದರೆ, ಸರಿಪಡಿಸಲು ಮೋದಿ ಅಸ್ತ್ರ ಬತ್ತಳಿಕೆಯಲ್ಲಿದೆ. ಮೋದಿ 'ವಿಶೇಷ ಪ್ರೀತಿ'ಯ ಅನುಭವ, ಅರಿವು ದೇವೇಗೌಡರೂ ಬಲ್ಲರು ಎನ್ನುವುದು ಪಕ್ಷದ ಮೂಲಗಳ ಅಂಬೋಣ.
ಇನ್ನಷ್ಟು ವೇಗ
ಬಹು ನಿರೀಕ್ಷಿತ ಕೆಂಪೇಗೌಡರ 108ರ ಅಡಿ ಎತ್ತರದ ಪ್ರತಿಮೆ, ಅದೂ ಮೋದಿಯಿಂದ ನೆರವೇರಿಸಿ ಮತ ಕ್ರೋಡೀಕರಣದ ತಂತ್ರಗಾರಿಕೆಗೆ ಬಿಜೆಪಿ ಇನ್ನಷ್ಟು ವೇಗ ನೀಡಿದೆ. ಜೂನ್ನಲ್ಲಿ ಬೆಂಗಳೂರಿಗೆ ಬಂದಿದ್ದ ಮೋದಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ನಂತರ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಿದ್ದರು. ಫಲಾನುಭವಿಗಳ ಜತೆಗೆ ಸಂವಾದ, ಮಠಾಧೀಶರ ಸಮಾವೇಶ, ರಾಜವಂಶಸ್ಥರ ಜತೆಗೆ ಉಪಾಹಾರ, ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನದ ಮೂಲಕ ಪಕ್ಷದ ಪರ ಅಲೆ ಸೃಷ್ಟಿಸಿದ್ದರು.
ಐದು ತಿಂಗಳಲ್ಲಿ ಎರಡನೇ ಬಾರಿ ಬೆಂಗಳೂರಿಗೆ ಆಗಮಿಸಿ ಐದು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಮಹರ್ಷಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಮಠದ ಶ್ರೀಗಳು ಈ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು. ಪರಿಶಿಷ್ಟ ಜಾತಿ, ಪಂಗಡ, ಇತರೆ ಹಿಂದುಳಿದ ವರ್ಗಗಳ ನಂತರ ಒಕ್ಕಲಿಗರನ್ನು ಓಲೈಸುವ ಕಾರ್ಯಕ್ಕೆ ಇಳಿದಿದ್ದು, ಫೈರ್ ಬ್ರಾಯಂಡ್ ನಂಜಾವಧೂತ ಶ್ರೀಗಳನ್ನು ಮೋದಿ ಜತೆಗೆ ವೇದಿಕೆ ಹಂಚಿಕೊಳ್ಳುವಂತೆ ಮಾಡಿ ಎದುರಾಳಿಗಳು ಯಾವುದೇ 'ಆಸರೆ' ಪಡೆಯದಂತೆ ಬಿಜೆಪಿ ನೋಡಿಕೊಂಡಿದೆ. ಈ ಕಾರ್ಯಕ್ರಮದ ಪ್ರಭಾವ, ಪರಿಣಾಮಗಳ ಬಗ್ಗೆ ಬಿಜೆಪಿ ಆಂತರಿಕವಾಗಿ ವಿಶ್ಲೇಷಣೆ, ಒರೆಗೆ ಹಚ್ಚಿದ್ದು, ಮೋದಿ ಕುರಿತು ಆದಿಚುಂಚನಗಿರಿ ಮಠದ ಶ್ರೀಗಳ ಹೊಗಳಿಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಭಾವಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ, ಬಹುಮತದ ಗಡಿಯಲ್ಲಿ ಎಡವಿದೆ. 89 ವಿಧಾನಸಭೆ ಕ್ಷೇತ್ರಗಳುಳ್ಳ ಹಳೇ ಮೈಸೂರು ಭಾಗದಲ್ಲಿ 22 ಸ್ಥಾನಗಳನ್ನು ಗೆದ್ದಿತ್ತು. ಸಂಖ್ಯಾವಾರು ಲೆಕ್ಕದ ಪ್ರಕಾರ, ಈ ಭಾಗದ ಬಲ ಶೇ.24. ಅದೇ ಉತ್ತರ ಕರ್ನಾಟಕದಲ್ಲಿ 82 ಕ್ಷೇತ್ರಗಳಲ್ಲಿ ಜಯಸಿ ಶೇ.60ರಷ್ಟು ಗಳಿಕೆ ಸಾಧನೆ ಮಾಡಿದೆ. ನಂತರ ವಲಸೆ ಬಂದ 17 ಪ್ಲಸ್- ಬಿಎಸ್ಪಿಯ ಎನ್.ಮಹೇಶ್ ಸೇರಿ ಹಳೇ ಮೈಸೂರು ಪ್ರದೇಶದಲ್ಲಿ ಪಕ್ಷದ ಶಾಸಕರ ಸಂಖ್ಯೆ 30ಕ್ಕೆ ವೃದ್ಧಿಯಾಗಿದ್ದು, ವಾಸ್ತವಾಂಶ ಅರಿತು ಮಿಷನ್ ದಕ್ಷಿಣ ಕಾರ್ಯತಂತ್ರ ಹೆಣೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ವಂತ ಬಲದಿಂದ ಮೇಲೆದ್ದು ಬರುವುದಕ್ಕಿಂತ ಬೇರೆ ಪಕ್ಷಗಳ ಪ್ರಭಾವಿಗಳಿಗೆ ಗಾಳ ಹಾಕಿದ್ದು, 150 ಗುರಿ ಸಾಧಿಸುವ ನಿಟ್ಟಿನಲ್ಲಿ ಹಳೇ ಮೈಸೂರು ಭಾಗದ ಮೇಲೂ ಪ್ರಾಬಲ್ಯ ಮೆರೆಯಲು ಬಯಸಿದೆ.
ಹೆಚ್ಚಿದ ಸಚಿವರ ಜವಾಬ್ದಾರಿ
ಪಕ್ಷದ ಪರೀಕ್ಷಾರ್ಥ ಪ್ರಯೋಗವು ಎಚ್.ಡಿ. ದೇವೇಗೌಡರನ್ನು ಬಿಟ್ಟಿರುವುದಕ್ಕೆ ಮಾತ್ರ ಅನ್ವಯಿಸು ವಂತಿಲ್ಲ, ಸಮುದಾಯದ ಸಚಿವರ ತಾಕತ್ತು ಪರೀಕ್ಷೆಗೆ ಒಳಗಾಗಲಿದೆ. ಹಿರಿಯ ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಆಶ್ವತ್ಥನಾರಾಯಣ ಹಾಗೂ ಪಕ್ಷಕ್ಕೆ ವಲಸೆ ಬಂದು ಸಚಿವರಾದವರ ಪೈಕಿ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ ಮತ್ತು ಕೆ.ಸಿ.ನಾರಾಯಣಗೌಡರ ಜವಾಬ್ದಾರಿ ಹೆಚ್ಚಿಸಿದೆ. ವರಿಷ್ಠರ ಆಣತಿಯಂತೆ ರೂಪಗೊಂಡ ಕಾರ್ಯಕ್ರಮದ ಸ್ಪಷ್ಟ ಸಂದೇಶವಿದಾಗಿದ್ದು, ಒಕ್ಕಲಿಗ ಬಾಹುಳ್ಯದ ಪ್ರಾಂತ್ಯವನ್ನು ಒಲಿಸಿಕೊಳ್ಳುವುದು ಸಚಿವರ ಮುಂದಿರುವ ಸವಾಲು.
ಶಾಸಕರು, ಸಂಸದರೊಂದಿಗೆ ಎಂಎಲ್ಸಿ ಲಕ್ಷ್ಮಣ ಸವದಿ ಸಭೆ
ಬೆಳಗಾವಿ: ಹಿಂದು ಪದ ಕುರಿತು ಸಹೋದರ ಸತೀಶ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಯಿಂದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಮುಜುಗರ ಆಗಿರಬೇಕು. ಹೀಗಾಗಿ ಮೌನವಾಗಿದ್ದಾರೆ ಎಂದು ವಿಧಾನಪರಿಷತ್ನ ಸದಸ್ಯ ಲಕ್ಷ್ಮಣ ಸವದಿ ಹೇಳಿದರು. ಪ್ರವಾಸಿ ಮಂದಿರದಲ್ಲಿ ಶನಿವಾರ ಬಿಜೆಪಿ ಶಾಸಕರು, ಸಂಸದರೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ ಜಾರಕಿಹೊಳಿಗೆ ಹಿಂದು ಪದದ ಕುರಿತು ನಾವೇನು ಚೀಟಿ ಕೊಟ್ಟು ಮಾತಾಡಿ ಅಂತ ಹೇಳಿದ್ವಾ? ಅವರ ಹೇಳಿಕೆ ಹಿಂದು ಧರ್ಮಕ್ಕೆ ಅವಹೇಳನ ಅನ್ನೋ ಭಾವನೆ ಹಿನ್ನೆಲೆಯಲ್ಲಿ ಧರಣಿ ಮಾಡಿದ್ದೇವೆ. ಇದೀಗ ಹೇಳಿಕೆ ವಾಪಸ್ ಪಡೆದಿದ್ದು, ವಿವಾದಕ್ಕೆ ತೆರೆ ಬಿದ್ದಿದೆ ಎಂದು ಭಾವಿಸಿದ್ದೇನೆ ಎಂದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಾಹನಕ್ಕೆ ಸತೀಶ ಜಾರಕಿಹೊಳಿ ಬೆಂಬಲಿಗರು ಘೇರಾವ್ ಹಾಕಿದ ಘಟನೆಯಲ್ಲಿ ರಾಜಕೀಯವಾಗಿ ಲಾಭ ಪಡೆಯುವ ಕೆಲಸ ಮಾಡಿಲ್ಲ. ಇದು ಗಂಭೀರವಾದ ಘಟನೆ ಅಲ್ಲ. ಇಂದು ನಾವೆಲ್ಲ ಒಟ್ಟಿಗೆ ಸೇರಿ ಕಡಾಡಿಗೆ ಧೈರ್ಯ ಹೇಳಿದ್ದೇವೆ. ಇದು ಅಧಿಕೃತ ಸಭೆಯಲ್ಲ. ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಕಾಗೆ ಹಾರಿಸಬೇಡಿ ಎಂದು ತಿಳಿಸಿದರು.