ನಾಗ ಚೈತನ್ಯ ಗರ್ಲ್ಫ್ರೆಂಡ್ ಸ್ಥಾನ ತುಂಬಲು ಬಂದ ನಟಿ ಪ್ರಿಯಾ ಭವಾನಿ ಶಂಕರ್; ಏನ್ ಸಮಾಚಾರ?
ಟಾಲಿವುಡ್ ನಟ ನಾಗ ಚೈತನ್ಯ (Naga Chaitanya) ಅವರು ಇತ್ತೀಚೆಗೆ ಸಿನಿಮಾಗಳಿಗಿಂತಲೂ ವೈಯಕ್ತಿಕ ಜೀವನದ ಕಾರಣದಿಂದಲೇ ಸುದ್ದಿ ಆಗಿದ್ದು ಹೆಚ್ಚು.
ತೆಲುಗು ಸಿನಿಮಾಗಳಲ್ಲಿ ಯಶಸ್ಸು ಕಂಡಿರುವ ನಾಗ ಚೈತನ್ಯ ಅವರು ಈಗ ವೆಬ್ ಸಿರೀಸ್ಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಮಾಜಿ ಪತ್ನಿ ಸಮಂತಾ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿ ಮೂಲಕ ಭಾರಿ ಗೆಲುವು ಪಡೆದುಕೊಂಡಿದ್ದರು. ಈಗ ನಾಗ ಚೈತನ್ಯ ಡಿಜಿಟಲ್ ಪ್ಲಾಟ್ಫಾರ್ಮ್ ಮೊರೆ ಹೋಗುತ್ತಿದ್ದಾರೆ. ಅವರು ನಟಿಸಲಿರುವ ಮೊದಲ ವೆಬ್ ಸರಣಿಯು ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಪ್ರಸಾರ ಆಗಲಿದೆ. ಅದರಲ್ಲಿ ನಾಗ ಚೈತನ್ಯ ಗರ್ಲ್ಫ್ರೆಂಡ್ ಪಾತ್ರವನ್ನು ಪ್ರಿಯಾ ಭವಾನಿ ಶಂಕರ್ ಮಾಡಲಿದ್ದಾರೆ. ಅವರಿಬ್ಬರನ್ನು ತೆರೆಮೇಲೆ ಜೋಡಿಯಾಗಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
2017ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾ ಭವಾನಿ ಶಂಕರ್ ಅವರಿಗೆ ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವ ಇದೆ. ಈಗ ಅವರ ವಯಸ್ಸು 31. ಅವರ ಮತ್ತು ನಾಗ ಚೈತನ್ಯ ಜೋಡಿ ಪರ್ಫೆಕ್ಟ್ ಆಗಲಿದೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ವೆಬ್ ಸರಣಿಗೆ ವಿಕ್ರಮ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ ಇದರಲ್ಲಿ ನಾಗ ಚೈತನ್ಯ ಅವರು ನೆಗೆಟಿವ್ ಶೇಡ್ ಇರುವಂತಹ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ವರ್ಷ ಸಾಯಿ ಪಲ್ಲವಿ ಜೊತೆ ನಟಿಸಿದ 'ಲವ್ ಸ್ಟೋರಿ' ಚಿತ್ರದಿಂದ ದೊಡ್ಡ ಗೆಲುವು ಪಡೆದ ನಂತರ ಅವರು ಈ ರೀತಿ ವೆಬ್ ಸಿರೀಸ್ ಮೂಲಕ ನೆಗೆಟಿವ್ ಪಾತ್ರ ಮಾಡಲು ಒಪ್ಪಿಕೊಂಡಿರುವುದು ಎಲ್ಲರಲ್ಲೂ ಕೌತುಕ ಮೂಡಿಸಿದೆ. ಹೆಚ್ಚಿನ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ.