ಭಾರೀ ಮಳೆಗೆ ದಾರಿ ಕಾಣದೆ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ
ಚಿಕ್ಕಮಗಳೂರು: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ದಾರಿ ಕಾಣದೇ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ ಹೊಡೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆ ಮೂಡಿಗೆರೆ ತಾಲೂಕಿನ ನೀರ್ ಗಂಡಿ ಬಳಿ ಘಟನೆ ನಡೆದಿದೆ. ಕಾರು ಢಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಯುವಕರು ಕಾರಿನಲ್ಲಿ ಹಾಸನದಿಂದ ಧರ್ಮಸ್ಥಳದ ಕಡೆ ಹೊರಟಿದ್ದರು.
ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಜಿಲ್ಲೆಯಲ್ಲಿ ಮಳೆಯಬ್ಬರ: ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಮಳೆಯಬ್ಬರ ಜೋರಾಗಿದೆ. ಕಳೆದ ರಾತ್ರಿ ಕಡೂರು ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಚಿಕ್ಕವಂಗಲದ ಬುಳ್ಳನಕೆರೆ ಉಕ್ಕಿ ಹರಿದಿದೆ. ಕೆರೆ ಪಕ್ಕದ ಅರಸು ಬಡಾವಣೆಗೆ ನೀರು ನುಗ್ಗಿದ ಪರಿಣಾಮ ಸುಮಾರು 25ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಮನೆಗೆ ನೀರು ನುಗ್ಗಿದ್ದರಿಂದ ಸ್ಥಳೀಯರ ಪರದಾಟ ಅನುಭವಿಸಿದ್ದು, ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.