ಕ್ರಿಶ್ಚಿಯನ್ ಶಾಲೆಯಲ್ಲಿ ಆಜಾನ್, ನೃತ್ಯ; ವ್ಯವಸ್ಥಿತ ಷಡ್ಯಂತ್ರ – ಮುತಾಲಿಕ್

ಇತ್ತೀಚೆಗೆ ಉಡುಪಿಯ ಶಂಕರ ನಾರಾಯಣ ಗ್ರಾಮದ ಮದರ್ ತೆರೆಸಾ ಶಾಲೆಯಲ್ಲಿ ಆಜಾನ್ ಗೆ ಸಂಬಂಧಿಸಿದ ನೃತ್ಯ ಮಾಡಿಸಿದ್ದು, ಈ ಮೂಲಕ ಕೋಮು ಭಾವನೆ ಕೆರಳಿಸುವ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಜಾನ್, ನೃತ್ಯ ಹಾಗೂ ಶಾಲೆಗೆ ಸಂಬಂಧವೇ ಇಲ್ಲಾ. ಅದೂ ಕೂಡಾ ಹಿಂದೂ ವಿದ್ಯಾರ್ಥಿಗಳ ಕಡೆಯಿಂದ ನೃತ್ಯ ಮಾಡಿಸಲಾಗಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದ್ದು, ಅನಾವಶ್ಯಕವಾಗಿ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಶಾಲೆಯವರು ಕ್ಷಮೆ ಕೇಳಿದ್ದಾರೆ. ಆದರೆ ಕ್ಷಮೆ ಸಾಲದು. ಈ ಘಟನೆಯ ಹಿಂದೆ ಯಾರಿದ್ದಾರೆ? ಯಾಕೆ ಮಾಡಿದ್ದಾರೆ ಎಂಬ ಕುರಿತು ತನಿಖೆಯಾಗಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ, ಮೈಸೂರಿನಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣದ ಕುರಿತು ಪ್ರತಿಕ್ರಿಯೆ ನೀಡಿದ ಮುತಾಲಿಕ್, ಗುಂಬಜ್ ಮಾದರಿಯ ಬಸ್ ನಿಲ್ದಾಣದ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಅದನ್ನು ಕೂಡಲೇ ತೆರವುಗೊಳಿಸಬೇಕು. ಈ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಬೆಂಬಲಿಸುವುದಾಗಿ ತಿಳಿಸಿದರು.
ಇನ್ನು, ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಪ್ರಮೋದ್ ಮುತಾಲಿಕ್, ಕಾರ್ಕಳ ಸೇರಿದಂತೆ ಮತ್ತಿತರ ಕ್ಷೇತ್ರಗಳಿಗೆ ಶೀಘ್ರದಲ್ಲೇ ಭೇಟಿ ನೀಡಿ, ನಂತರ ಡಿಸೆಂಬರ್ 2 ನೇ ವಾರದಲ್ಲಿ ಕ್ಷೇತ್ರದ ಕುರಿತು ಘೋಷಣೆ ಮಾಡುವುದಾಗಿ ಸ್ಪಷ್ಟಪಡಿಸಿದರು.