ನೋಟಿನಲ್ಲಿ ಫೋಟೋ ವಿವಾದ: ಆಪ್ ಮತ್ತು ಬಿಜೆಪಿ ನಡುವೆ ವಾಕ್ಸಾಮರ - ಶಿವಾಜಿ ಫೋಟೋ ಇರುವ ನೋಟು ವೈರಲ್
ನವದೆಹಲಿ: ಭಾರತೀಯ ಕರೆನ್ಸಿ ನೋಟುಗಳಲ್ಲಿ ಬದಲಾವಣೆ ತಂದು, ಲಕ್ಷ್ಮಿ ಮತ್ತು ಗಣೇಶ ದೇವರ ಚಿತ್ರಗಳನ್ನು ಮುದ್ರಿಸಬೇಕು ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳುತ್ತಿರುವ ಬೆನ್ನಲ್ಲೇ, ಆಪ್ ಮತ್ತು ಬಿಜೆಪಿ ನಡುವೆ ಮಾತಿನ ಚಕಮಕಿ ಶುರುವಾಗಿದೆ.
ಈಗ ಹೊಸ ನೋಟುಗಳಲ್ಲಿ ಗಾಂಧೀಜಿ ಅವರ ಚಿತ್ರದ ಜತೆಗೆ, ಇನ್ನೊಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವರ ಚಿತ್ರಗಳನ್ನೂ ಪ್ರಕಟಿಸಬೇಕು ಎಂದು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿ ಬರೆದಿದ್ದರು.
ಈ ನಡುವೆಯೇ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರ ಅಳವಡಿಸಿದ 200 ರೂಪಾಯಿ ಮುಖಬೆಲೆಯ ನೋಟಿನ ಚಿತ್ರವನ್ನು ಫೋಟೋಶಾಪ್ ಮಾಡಿ ಬಿಜೆಪಿ ನಾಯಕ ನಿತೇಶ್ ರಾಣಾ ಹಂಚಿಕೊಂಡಿದ್ದು ಇದು ಮತ್ತಷ್ಟು ಬಿಸಿಯೇರಿಸಿದೆ.
ಮಹಾರಾಷ್ಟ್ರದ ಕಂಕವ್ಲಿ ಕ್ಷೇತ್ರದ ಬಿಜೆಪಿ ಶಾಸಕ ನಿತೇಶ್ ರಾಣಾ, ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. "ಇದು ಪರ್ಫೆಕ್ಟ್ ಆಗಿದೆ" ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ವೇಳೆ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆ ರಾಜಕೀಯ ಉದ್ದೇಶ ಹೊಂದಿದೆ ಎಂದು ಅನೇಕರು ಟೀಕಿಸಿದ್ದಾರೆ. ಐಐಟಿಯಲ್ಲಿ ಪದವಿ ಪಡೆದಿರುವ ಕೇಜ್ರಿವಾಲ್, ಇಂತಹ ಅಸಂಬದ್ಧ ಹೇಳಿಕೆ ನೀಡುವುದರ ಹಿಂದೆ ರಾಜಕೀಯ ಇದೆ ಎಂದು ವಿಪಕ್ಷಗಳು ಅಭಿಪ್ರಾಯಪಟ್ಟಿವೆ. ಇದು ನಕಲಿ ಹಿಂದುತ್ವ ಎಂದು ಬಿಜೆಪಿ ಆರೋಪಿಸಿದೆ. ವಿಜ್ಞಾನದ ಬದಲು ಬಹುಸಂಖ್ಯಾತ ವಾದವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.