ಮೋದಿಯ ಮನೆಯಂಗಳದಿ ಕೇರಳ ಬಾಲಕಿಯ ಸೀಬೆ ಗಿಡ

ಮೋದಿಯ ಮನೆಯಂಗಳದಿ ಕೇರಳ ಬಾಲಕಿಯ ಸೀಬೆ ಗಿಡ

ಕೇರಳ: ಪ್ರಧಾನಿ ನರೇಂದ್ರ ಮೋದಿ ನಿವಾಸದ ಅಂಗಳದ ಉದ್ಯಾನವನದಲ್ಲಿ ಇನ್ನುಮುಂದೆ ಕೇರಳ ಬಾಲಕಿಯ ಸೀಬೆ ಗಿಡ ಹೂ ಬಿಡಲಿದೆ. ಸಾವಯವ ಕೃಷಿಯ ಕನಸನ್ನು ಹೊತ್ತಿರುವ ಜಯಲಕ್ಷ್ಮಿ ಎನ್ನುವ 10ನೇ ತರಗತಿಯ ಬಾಲಕಿಗೆ ಸೇರಿದ ಗಿಡ ಅದು. ಆಕೆ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಪಂಡಲಂ ಊರಿನ ನಿವಾಸಿ. ಬಾಲಕಿ ಜಯಲಕ್ಷ್ಮಿ ಬೆಳೆಸಿದ ಗಿಡವನ್ನು ಮಲಯಾಲಂ ಚಿತ್ರನಟ, ರಾಜಕಾರಣಿ ಸುರೇಶ್ ಗೋಪಿ ಉಡುಗೊರೆಯಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದಾರೆ. ಜಯಲಕ್ಷ್ಮಿ ಆ ಗಿಡವನ್ನು ಸುರೇಶ್ ಗೋಪಿಯವರಿಗೆ ಉಡುಗೊರೆಯಾಗಿ ನೀಡಿದ್ದಳು.

ಜಯಲಕ್ಷ್ಮಿ ತನ್ನ ಮನೆಯ ಅಂಗಳದಲ್ಲಿ ಸಾವಯವ ಉದ್ಯಾನವನ ನಿರ್ಮಿಸಿದ್ದಾಳೆ. ಅದೇ ಕಾರಣಕ್ಕೆ ರಾಜ್ಯ ಸರ್ಕಾರದಿಂದ ಪ್ರಶಸ್ತಿಯನ್ನೂ ಪಡೆದಿದ್ದಾಳೆ. ಈ ಹಿಂದೆ ಜಯಲಕ್ಷ್ಮಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಳು ಎನ್ನುವುದು ವಿಶೇಷ. ಪತ್ರದಲ್ಲಿ ಸಾವಯವ ಕೃಷಿಯತ್ತ ಹೊರಳಲು ಯುವಜನತೆಗೆ ಸ್ಫೂರ್ತಿ ಮತ್ತು ಪ್ರೋತ್ಸಾಹ ನೀಡಬೇಕೆಂದು ಆಕೆ ಮೋದಿಯವರಲ್ಲಿ ಮನವಿ ಮಾಡಿಕೊಂಡಿದ್ದಳು. ತನ್ನ ಗಿಡ ಪ್ರಧಾನಿ ಮೋದಿಯವರನ್ನು ತಲುಪುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ ಎಂದು ಜಯಲಕ್ಷ್ಮಿ ಪ್ರತಿಕ್ರಿಯಿಸಿದ್ದಾಳೆ.