ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದ ಕೇರಳದ ಐವರು ವಂಚಕರು ಅರೆಸ್ಟ್
ಬೆಂಗಳೂರು,ಸೆ.14- ತಂತ್ರಜ್ಞಾನದ ಮೂಲಕ ಅಕ್ರಮವಾಗಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ವಂಚಿಸುತ್ತಿದ್ದ ಕೇರಳ ಮೂಲದ ಐವರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಡ್ಯಾನೀಷ್ ಪೊವರ್, ವಿಪಿನ್ ಕೆ.ಪಿ., ಸುಭಾಷ್, ಬಿಜಿನ್ ಜೋಸೆಫ್ ಮತ್ತು ಸಮ್ಮದ್ ಸಾಜಾನ್ ಬಂತ ಆರೋಪಿಗಳು.
ರಾಜಾಜಿನಗರ, ಕೋರಮಂಗಲ ಹಾಗೂ ಮೈಕೋಲೇಔಟ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜಿಯೋ ಕಂಪನಿಯ ಟ್ರಂಕ್ ಕಾಲ್ ಡಿವೈಸ್‍ಗಳನ್ನು ಪಡೆದು ಬಿಜ್ಯುಬ್ ಸಲ್ಯುಷನ್(ಒಪಿಸಿ) ಪ್ರೈವೇಟ್ ಲಿಮಿಟೆಡ್, ಒಟೂರ್ ಟೆಕ್ನಾಲೀಜಿಸ್ ಪ್ರೈವೇಟ್ ಲಿಮಿಟೆಡ್ ಮತ್ತು ಟೈಮ್ ಇನೋ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗಳನ್ನು ಸ್ಥಾಪಿಸಿ ದಾಖಲೆಗಳನ್ನು ಸೃಷ್ಟಿಸಿ ಎಸ್‍ಐಪಿ ಪೋರ್ಟಲ್‍ಗಳಿಂದ ಸ್ಥಿರ ದೂರವಾಣಿಯನ್ನು ಪಡೆದುಕೊಂಡು ಟೆಲಿಪೋನ್ ಎಕ್ಸಚೇಂಜ್ ರೀತಿಯಲ್ಲಿ ಇಒಎಲ್‍ಪಿ( ವಾಯ್ಸ್ ಓವರ್ ಇಂಟರನೆಟ್ ಪೋರ್ಟೊಕಾಲ್) ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ವಂಚಿಸುತ್ತಿದ್ದರು.
ಈ ಬಗ್ಗೆ ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಸಂಬಂಧ ಮುಂದಿನ ತನಿಖೆ ಕೈಗೊಂಡಿದ್ದ ಸಿಸಿಬಿ ಆರ್ಥಿಕ ಅಪರಾಧ ದಳ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿ ಕಂಪ್ಯೂಟರ್‍ಗಳು, ಲ್ಯಾಪ್‍ಟಾಪ್‍ಗಳು, ವಂಚನೆಗೆ ಬಳಸಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಶೇಷವೆಂದರೆ ಕೋರಮಂಗಲದ ಬಿಜ್ಯುಬ್ ಸಲ್ಯುಷನ್ ಕಂಪನಿಯಲ್ಲೇ ಸುಮಾರು 1500 ಸಿಪ್ ಪೋರ್ಟಲ್‍ಗಳ ಸಂಪರ್ಕ ಪಡೆದಿದ್ದು, 40 ದಿನಗಳಲ್ಲಿ ಸುಮಾರು 68 ಲಕ್ಷ ನಿಮಿಷಗಳ ಅಕ್ರಮವಾಗಿ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಲಾಗಿದೆ.
ಇನ್ನು ಮೈಕೋಲೇಔಟ್‍ನ ಒಟೂರ್ ಟೆಕ್ನಾಲೀಜಿಸ್‍ನಲ್ಲಿ 900 ಸಿಪ್ ಪೋರ್ಟಲ್ ಪಡೆದು 60 ದಿನಗಳಲ್ಲಿ 24 ನಿಮಿಷಗಳ ಅಕ್ರಮ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ದೇಶದ ಆಂತರಿಕ ಭದ್ರತೆಗೂ ಧಕ್ಕೆ ಉಂಟಾಗುವ ಕೃತ್ಯ ವೆಸಗಿರುತ್ತಾರೆ. ಈ ಬಗ್ಗೆ ಪೊಲೀಸರು ವಿಸ್ತೃತ ತನಿಖೆ ನಡೆಸುತ್ತಿದ್ದಾರೆ.