ಚಿರು ಪುತ್ರನಿಗೆ 'ರಾಯನ್‌ ರಾಜ್‌ ಸರ್ಜಾ'ನಾಮಕರಣ

ಚಿರು ಪುತ್ರನಿಗೆ 'ರಾಯನ್‌ ರಾಜ್‌ ಸರ್ಜಾ'ನಾಮಕರಣ

ಬೆಂಗಳೂರು: ಕಳೆದ ವರ್ಷ ನಿಧನರಾದ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ 10 ತಿಂಗಳು ಪ್ರಾಯದ ಪುತ್ರನಿಗೆ 'ರಾಯನ್‌ ರಾಜ್‌ ಸರ್ಜಾ' ಎಂದು ನಾಮಕರಣ ಮಾಡಲಾಗಿದೆ.

ನಗರದ ಚಾನ್ಸರಿ ಪೆವಿಲಿಯನ್‌ ಹೋಟೆಲ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ನಟ ಧ್ರುವ ಸರ್ಜಾ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ನಾಮಕರಣದ ವಿಡಿಯೊವೊಂದನ್ನು ಮೇಘನಾ ರಾಜ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, 'ರಾಯನ್‌ ರಾಜ್‌ ಸರ್ಜಾ- ನಮ್ಮ ಯುವರಾಜ' ಎಂದು ಬರೆದುಕೊಂಡಿದ್ದಾರೆ. ವಿಡಿಯೊದಲ್ಲಿ ಚಿರಂಜೀವಿ ಸರ್ಜಾ ಅವರನ್ನೂ ಮೇಘನಾ ನೆನಪಿಸಿಕೊಂಡಿದ್ದಾರೆ.

ಇಲ್ಲಿಯವರೆಗೂ ಸಿಂಬಾ, ಶಿಷ್ಯ, ಮಿನಿಮಮ್‌, ಚಿಂಟು, ಬರ್ಫಿ, ಚಿರು, ಲಿಟಲ್‌ ಚಿರು, ಜ್ಯೂನಿಯರ್‌ ಚಿರು ಹೀಗೆ ಹಲವು ಹೆಸರುಗಳಲ್ಲಿ ಮಗುವನ್ನು ಕುಟುಂಬದ ಸದಸ್ಯರು ಹಾಗೂ ಚಿರು ಅಭಿಮಾನಿಗಳು ಕರೆಯುತ್ತಿದ್ದರು. 2020ರ ಜೂನ್‌ 7ರಂದು ತೀವ್ರ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಮೃತಪಟ್ಟಿದ್ದರು. 2020ರ ಅಕ್ಟೋಬರ್‌ 22ರಂದು ಗಂಡು ಮಗುವಿಗೆ ಮೇಘನಾ ಜನ್ಮನೀಡಿದ್ದರು.