ಈ ಹೋರಿಗೆ ಕೋಟಿ ರೂ, ಒಂದು ಡೋಸ್ ವೀರ್ಯಕ್ಕೆ ಸಾವಿರಾರು ರೂ! ಕೃಷಿ ಮೇಳದಲ್ಲಿ ಹೋರಿ, ಹೋತಗಳ ಅಚ್ಚರಿ.

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಈ ವರ್ಷದ ಕೃಷಿ ಮೇಳ ಗುರುವಾರ (ನ.11) ಆರಂಭವಾಗಿದ್ದು, 13ವರೆಗೆ ಇರಲಿದೆ.
ಕೋಟಿ ಬೆಲೆ ಬಾಳುವ ಹಳ್ಳಿಕಾರ್ ತಳಿಯ ಹೋರಿ ಹಾಗೂ ಏಳು ಲಕ್ಷ ರೂ. ಬೆಲೆಬಾಳುವ ಹೋತ.
ಹೋರಿಗೇಕೆ ಇಷ್ಟು ರೇಟು?
ಸಾಮಾನ್ಯವಾಗಿ ಹೋರಿಗಳು ಅಬ್ಬಬ್ಬಾ ಎಂದರೆ ಎರಡು ಲಕ್ಷ ರೂಪಾಯಿಗೆ ಸಿಗುವುದಿದೆ. ಅವುಗಳಿಗಿಂತ ತುಸು ರೇಟ್ ಹೆಚ್ಚೂ ಕಮ್ಮಿ ಇರಬಹುದು. ಆದರೆ ಇಲ್ಲಿರುವ ಈ ಹೋರಿಯ ಬೆಲೆ ಬರೋಬ್ಬರಿ ಒಂದು ಕೋಟಿ ರೂ! ಮಂಡ್ಯದ ಮಳವಳ್ಳಿಯ ರೈತ ಈ ಹೋರಿ ತಂದಿದ್ದಾರೆ. ನಶಿಸಿಹೋಗುತ್ತಿರುವ ಈ ಹೋರಿಯ ತಳಿಯ ರಕ್ಷಣೆ ಮಾಡುತ್ತಿದ್ದಾರೆ ಬೋರೇಗೌಡ.
ಮೂರೂವರೆ ವರ್ಷ ವಯಸ್ಸಿನ ಈ ಹೋರಿಗೆ ಇಷ್ಟೊಂದು ಡಿಮಾಂಡ್ ಇರಲು ಕಾರಣ ಇದರ ವೀರ್ಯ. ವಾರಕ್ಕೊಮ್ಮೆ ಇದರಿಂದ ವೀರ್ಯಾಣು ತೆಗೆದು, ಸಂಗ್ರಹಿಸಿಡಲಾಗುತ್ತದೆ. ಒಂದು ಡೋಸ್ ವೀರ್ಯಾಣುವನ್ನು ಒಂದು ಸಾವಿರ ರೂ.ನಂತೆ ಮಾರಲಾಗುತ್ತದೆ. ರಾಮನಗರ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದರ ವೀರ್ಯ ಮಾರಾಟ ಘಟಕಗಳನ್ನು ತೆರೆಯಲಾಗಿದೆ ಎಂಬ ಮಾಹಿತಿ ನೀಡುತ್ತಾರೆ ಬೋರೇಗೌಡ.
ಇದಕ್ಕೆ ನಾನು ಕೃಷ್ಣ ಎಂದು ಹೆಸರು ಇಟ್ಟಿದ್ದೇನೆ. ಇದರ ಎತ್ತರ 6.2 ಅಡಿಯಷ್ಟಿದ್ದು, 8 ಅಡಿಗೂ ಹೆಚ್ಚು ಉದ್ದವಿದೆ. ಇದರ ತೂಕ 800 ಕೆ.ಜಿ. ಇದೆ. ಇದರ ಹಾಲಿನಲ್ಲಿ ಎ2 ಪ್ರೊಟೀನ್ ಅಂಶವಿದ್ದು, ಆರೋಗ್ಯಕ್ಕೆ ತುಂಬಾ ಮಹತ್ವದ್ದಾಗಿದೆ. ಸರಿಯಾಗಿ ನೋಡಿಕೊಂಡರೆ 20 ವರ್ಷ ಬದುಕುತ್ತದೆ, ಎನ್ನುತ್ತಾರೆ ಬೋರೇಗೌಡ.
ಹೋತಕ್ಕೆ ಏಳು ಲಕ್ಷ ರೂ.
ದಕ್ಷಿಣ ಆಫ್ರಿಕಾ ಮೂಲದ ಬೋಯರ್ ಹೋತ ಕೃಷಿ ಮೇಳದ ಆಕರ್ಷಣೆಯಾಗಿದೆ. ಚಿಕ್ಕನಾಯಕನಹಳ್ಳಿಯಿಂದ ಜತಿನ್ ಆಗ್ರೊ ಫಾರಂನ ವೆಂಕಟೇಶ್ ಎನ್ನುವವರು ಇದನ್ನು ಇಲ್ಲಿಗೆ ತಂದಿದ್ದಾರೆ. ಆರು ತಿಂಗಳ ಈ ಹೋತದ ತೂಕ ಬರೋಬ್ಬರಿ 70 ಕೆ.ಜಿ. ಈ ಹೋತಗಳು ದೊಡ್ಡದಾಗುತ್ತಿದ್ದಂತೆಯೇ ಅಂದರೆ ಒಂದೂವರೆ ವರ್ಷ ವಯಸ್ಸಿನದ್ದಾಗಿದ್ದು, 135-140 ಕೆ.ಜಿ.ಯವರೆಗೆ ತೂಕ ಬರುತ್ತದೆ, ಮಾತ್ರವಲ್ಲದೇ ಇದರ ಮಾಂಸ ಕೂಡ ಬಲು ರುಚಿ ಎನ್ನುತ್ತಾರೆ ವೆಂಕಟೇಶ್.
ಈ ತಳಿಯ ಮೇಕೆಗಳನ್ನು ಮಾಂಸಕ್ಕಿಂತಲೂ ಹೆಚ್ಚಾಗಿ ಸಂತಾನೋತ್ಪತ್ತಿಗಾಗಿ ಬಳಸಲಾಗುತ್ತದೆ. ರಾಜ್ಯದ ಹವಾಮಾನಕ್ಕೆ ಬೋಯರ್ ತಳಿಯ ಮೇಕೆ ಹಾಗೂ ಹೋತಗಳು ಹೊಂದಿಕೊಳ್ಳುತ್ತವೆ ಎನ್ನುತ್ತಾರೆ ಅವರು.
ಕೆಲ ವರ್ಷಗಳ ಹಿಂದೆ ಪುಣೆಯಿಂದ ಒಂದು ಗಂಡು ಹೋತ ಮತ್ತು ಒಂದು ಹೆಣ್ಣು ಮೇಕೆಯನ್ನು ಎರಡೂವರೆ ಲಕ್ಷ ರೂಪಾಯಿ ನೀಡಿ ತರಲಾಗಿತ್ತು. ಇದೀಗ ಇವುಗಳ ಸಂಖ್ಯೆ 15 ಆಗಿದೆ. ಒಂದೊಂದು ಹೋತಕ್ಕೂ ಏಳು ಲಕ್ಷ ರೂ.ವರೆಗೆ ಇದೆ ಎಂದು ಅವರು ವಿವರಿಸುತ್ತಾರೆ.