BMRCL ಮತ್ತು DULTಗೆ ಅತ್ಯುತ್ತಮ ನಗರ ಸಾರಿಗೆ ಶ್ರೇಷ್ಠತೆ ಪ್ರಶಸ್ತಿ

ಬೆಂಗಳೂರು, ನವೆಂಬರ್ 07: ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಂಸ್ಥೆಗಳಿಗೆ ಅತ್ಯುತ್ತಮ ನಗರ ಸಾರಿಗೆ ಶ್ರೇಷ್ಠತೆಯ ಪ್ರಶಸ್ತಿ ನೀಡಿ ಸೋಮವಾರ ಗೌರವಸಿಲಾಗಿದೆ.
ಕೇರಳದ ಕೊಚ್ಚಿಯಲ್ಲಿ ಸೋಮವಾರ ಅರ್ಬನ್ ಇನ್ಫ್ರಾ ಕಮ್ಯುನಿಕೇಷನ್ಸ್ ಮತ್ತು PR ಕಂಪನಿ ವತಿಯಿಂದ ನಡೆದ 'ಅರ್ಬನ್ ಮೊಬಿಲಿಟಿ ಇಂಡಿಯಾ ಕಾನ್ಫರೆನ್ಸ್' ನಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ 'ಅತ್ಯುತ್ತಮ ನಗರ ಸಾರಿಗೆ ಶ್ರೇಷ್ಠತೆ' ಯ ಪ್ರಶಸ್ತಿ ನೀಡಲಾಗಿದೆ.
ಅತ್ಯುತ್ತಮ ಪ್ರಯಾಣಿಕ ಸೇವೆ ಮತ್ತು ಸಾರಿಗೆ ಸೇವೆ ತೃಪ್ತಿ ನೀಡುತ್ತಿದೆ ಎಂಬ ಮೆಟ್ರೋ ರೈಲು ಕ್ಯಾಟಗರಿಯಲ್ಲಿ ಪ್ರಶಸ್ತಿಯನ್ನು 'ನಮ್ಮ ಮೆಟ್ರೋ' ಪಡೆದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಕೈಗಾರಿಕಾ ವಿಭಾಗದಡಿ 'ಅತ್ಯಂತ ನವೀನ ಅರ್ಬನ್ ಮೊಬಿಲಿಟಿ ಲೀಡರ್ ಪ್ರಶಸ್ತಿ'ಯನ್ನು ನಗರ ಭೂ ಸಾರಿಗೆ ನಿರ್ದೇಶನಾಲಯದ (ಡಿಯುಎಲ್‌ಟಿ/ಡಲ್ಟ್) ಪಡೆದಿದೆ. ಜೊತೆಗೆ ನಗರ ಮೂಲಸೌಕರ್ಯ ವಿಭಾಗದ ಅಡಿಯಲ್ಲಿ ನಗರಾಭಿವೃದ್ಧಿಗಾಗಿ ಅತ್ಯಂತ ಮೆಚ್ಚುಗೆ ಪಡೆದ ನಗರ ಯೋಜನಾ ಸಂಸ್ಥೆಯ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ. ಡಲ್ಟ್ ಆಯುಕ್ತೆ ವಿ. ಮಂಜುಳಾ ಪ್ರಶಸ್ತಿ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
ರಾಜ್ಯ ರಾಜಧಾನಿ ಜನರಿಗೆ ಉತ್ತಮ ಸಾರಿಗೆ ಸೇವೆ ನೀಡುತ್ತಿರುವ 'ನಮ್ಮ ಮೆಟ್ರೋ'ಗೆ ಕಾರ್ಪೊರೇಟ್ ವರ್ಗದ ಅಡಿಯಲ್ಲಿ 'ನಗರ ಸಾರಿಗೆ ಶ್ರೇಷ್ಠತೆಯ ಪ್ರಶಸ್ತಿಗೆ ಭಾಜನವಾಗುವ ಮೂಲಕ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್)ಗೆ ಮತ್ತೊಂದು ಸಾಧನೆಗೆ ಮಾಡಿದೆ.
ಇದೇ ರೀತಿ ಸಮಾರಂಭದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಕಂಪನಿಯು ರೈಲು ಮತ್ತು ಮೆಟ್ರೋ ಸಿಸ್ಟಮ್ಸ್ ಸ್ವದೇಶಿ ಆವಿಷ್ಕಾರದಲ್ಲಿನ ಶ್ರೇಷ್ಠತೆಗಾಗಿ ಪ್ರಶಸ್ತಿ ಪಡೆದುಕೊಂಡಿದೆ. ಹುಬ್ಬಳ್ಳಿ-ಧಾರವಾಡ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ಸ್ ಲಿಮಿಟೆಡ್ ಟ್ರಾನ್ಸಿಟ್ ಮತ್ತು ಮೊಬಿಲಿಟಿ ವಿಭಾಗದಲ್ಲಿ ಹೆಚ್ಚು ಆದ್ಯತೆಯ ಸಾರಿಗೆ ವ್ಯವಸ್ಥೆ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿ ಸಮಾರಂಭದ ಎರಡನೇ ಆವೃತ್ತಿ ಇದಾಗಿದ್ದು, ಮೊದಲ ಆವೃತ್ತಿಯನ್ನು 2020 ರಲ್ಲಿ ನಡೆಸಲಾಗಿತ್ತು. ಸಮಾರಂಭದಲ್ಲಿ ವ್ಯಾಪಾರ ಅಭಿವೃದ್ಧಿ ಮತ್ತು ಕಾರ್ಪೊರೇಟ್ ಸಂವಹನಗಳ ನಿರ್ದೇಶಕರು, ಅರ್ಬನ್ ಇನ್ಫ್ರಾ ಕಮ್ಯುನಿಕೇಷನ್ಸ್‌ನ ವಿನೋದ್ ಶಾ ಮತ್ತಿತರರು ಉಪಸ್ಥಿತರಿದ್ದರು.