ಕಿಲೋ ಕೂದಲಿಗೆ 15535 ರೂ.; ಮುಡಿ ಕೂದಲಿಂದಲೇ ಮಹದೇಶ್ವರನಿಗೆ ಸಿಕ್ಕ ಆದಾಯ ಎಷ್ಟು ಗೊತ್ತಾ?
ಚಾಮರಾಜನಗರ (ಸೆ. 10): ತಲೆ ಕೂದಲು ಮಹಿಳೆಯಾಗಲಿ, ಪುರುಷನಾಗಲಿ ಅವರ ಸೌಂದರ್ಯವನ್ನು ಇಮ್ಮಡಿ ಗೊಳಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗಾಗಿಯೇ ಉದ್ದ ಕೂದಲು ಬೆಳೆಸಲು ಅಥವಾ ಕೂದಲು ಉದುರುವುದನ್ನು ತಡೆಗಟ್ಟಲು ನಾನಾ ರೀತಿಯ ಸರ್ಕಸ್ ಮಾಡುವುದನ್ನು ನೋಡಿದ್ದೇವೆ. ಔಷಧಿಗಳಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವುದನ್ನು ಕೇಳಿದ್ದೇವೆ. ಈಗ ಇದೇ ಕೂದಲಿಗೆ ಭಾರೀ ಬೆಲೆ ಇದೆ. ಒಂದು ಕೆಜಿ ಉದ್ದ ಕೂದಲು ಬೆಲೆ ಕೇಳಿದರೆ ನಿಜಕ್ಕೂ ಅಚ್ಚರಿಪಡ್ತೀರಾ. ಕಳೆದ ವರ್ಷ ಪ್ರತಿ ಕೆಜಿ ಉದ್ದ ಕೂದಲಿನ ಬೆಲೆ (Rate for Hair) 7000 ರೂಪಾಯಿ ಆಸುಪಾಸಿನಲ್ಲಿತ್ತು. ಆದರೆ ಇದ್ದಕ್ಕಿದ್ದಂತೆ ಈ ವರ್ಷ ಕೂದಲಿನ ಬೆಲೆ ದುಪ್ಪಟ್ಟಾಗಿದೆ.
ಕೊರೋನಾ ಕಾರಣದಿಂದ ಮಹದೇಶ್ವರ ಬೆಟ್ಟ (Male Mahadeshwara Hills), ತಿರುಪತಿ (Tirupathi), ಧರ್ಮಸ್ಥಳ (Dharmasthala), ಕುಕ್ಕೆ ಸುಬ್ರಹ್ಮಣ್ಯ (Kukke Subrahmanya) ಮೊದಲಾದ ದೇವಸ್ಥಾನಗಳಲ್ಲಿ ಮುಡಿ ಸೇವೆ ಕಡಿಮೆಯಾಗಿದೆ. ಹಾಗಾಗಿ ಕೂದಲಿಗೆ ಬೇಡಿಕೆ ಹೆಚ್ಚಾಗಿದ್ದು ದರ ಹೆಚ್ಚಳವಾಗಲು ಕಾರಣವಾಗಿದೆ. ಸಾಮಾನ್ಯವಾಗಿ ಉದ್ದ ಕೂದಲನ್ನು ವಿಗ್ (Wig) ಹಾಗು ಚೌರಿ (ಮಹಿಳೆಯರು ಜಡೆಯೊಂದಿಗೆ ಹಾಕಿಕೊಳ್ಳುವ ಕೂದಲಿನ ಕುಚ್ಚ) ತಯಾರಿಸಲು ಹಾಗು ತುಂಡು ಕೂದಲನ್ನು (Short Hairs) ವಿಗ್ ಹಾಗು ಅಲಂಕಾರಿಕ ವಸ್ತು ತಯಾರಿಸಲು ಬಳಸುತ್ತಾರೆ.ವಿದೇಶಗಳಿಗು ತಲೆಗೂದಲು ರಫ್ತಾಗುತ್ತದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಮುಡಿಸೇವೆಯಿಂದ ಸಂಗ್ರಹವಾಗಿರುವ ಕೂದಲನ್ನು ಹರಾಜಿಗೆ ಇಡಲಾಗಿತ್ತು. ಕಳೆದ ವರ್ಷ ಪ್ರತಿ ಕೆಜಿ ಉದ್ದ ಕೂದಲು 7400 ರೂಪಾಯಿಗೆ ಹರಾಜಾಗಿತ್ತು. ಆದರೆ ಈ ವರ್ಷ ಇ ಟೆಂಡರ್ ನಲ್ಲಿ ಪ್ರತಿ ಕೆಜಿಗೆ ಉದ್ದನೆಯ ಕೂದಲಿಗೆ 15535 ರೂಪಾಯಿ ದರ ಬಿಡ್ ಮಾಡಲಾಗಿದೆ. ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ಕೆಜಿ ಕೂದಲಿನ ದರ 8135 ರೂಪಾಯಿ ಹೆಚ್ಚಳವಾಗಿದೆ. ಇದು ಈವರೆಗಿನ ಸಾರ್ವಕಾಲಿಕ ದಾಖಲೆಯ ದರವು ಹೌದು ಎನ್ನುತ್ತಾರೆ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ.
ಉದ್ದ ಕೂದಲಿನ ಬೆಲೆಯಷ್ಟೇ ಅಲ್ಲ, ತುಂಡು ಕೂದಲಿನ ದರವೂ ಒಂದುವರೆ ಪಟ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಒಂದು ಕೆಜಿ ತುಂಡು ಕೂದಲಿನ ಬೆಲೆ 13 ರೂಪಾಯಿಗೆ ಹರಾಜಾಗಿತ್ತು. ಆದರೆ ಈ ಬಾರಿ 34.50 ರೂಪಾಯಿ ಬಿಡ್ ಮಾಡಲಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ಕೆಜಿ ತುಂಡು ಕೂದಲಿನ ಬೆಲೆ 21.50 ರೂಪಾಯಿ ಹೆಚ್ಚಳವಾಗಿದೆ.
: ಹಿಂದಿ ಹೇರಿಕೆ ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ; ತಮಿಳುನಾಡಿನೊಂದಿಗೆ ಹಿಂದಿಯಲ್ಲಿ ಸಂವಹನ ಬೇಡ ಎಂದು ಕೇಂದ್ರಕ್ಕೆ ತಾಕೀತು
ಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಸರಾಸರಿ 3000 ಕೆಜಿ ಉದ್ದಕೂದಲು 6000 ಕೆಜಿ ತುಂಡು ಕೂದಲು ಸಂಗ್ರಹವಾಗುತ್ತದೆ. ಸದ್ಯ 951 ಕೆಜಿ ಉದ್ದ ಕೂದಲು, 4595 ಕೆಜಿ ತುಂಡು ಕೂದಲು ಸಂಗ್ರಹವಿದ್ದು ಬಹಿರಂಗ ಹರಾಜಿನಲ್ಲಿ ಬೆಂಗಳೂರು, ಮೈಸೂರು ಹಾಗು ನೆರೆಯ ತಮಿಳುನಾಡಿನ 14 ಜನ ಭಾಗವಹಿಸಿದ್ದರು. ಇವರು ಉದ್ದ ಕೂದಲಿಗೆ ಪ್ರತಿ ಕೆಜಿಗೆ 14500 ರೂಪಾಯಿಗಳವರೆಗೂ ಕೂಗಿದರು. ಆದರೆ ಮೈಸೂರು ಮೂಲದ ಶ್ರೀನಿವಾಸ್ ಮಹದೇವನ್ ಎಂಬ ವ್ಯಾಪಾರಿ ಆನ್ಲೈನ್ನಲ್ಲಿ (E-Procuremnt) ನಲ್ಲಿ 15535 ರೂಪಾಯಿ ಬಿಡ್ ಮಾಡಿದ್ದಾರೆ. ಉದ್ದ ಕೂದಲಿನಿಂದಲೇ ಮಹದೇಶ್ವರನಿಗೆ 1,47, 81,863 ರೂಪಾಯಿ ಆದಾಯ ಬಂದಿದೆ.
ಇನ್ನು ತುಂಡು ಕೂದಲನ್ನು ಪ್ರತಿ ಕೆಜಿಗೆ 34.50 ರೂಪಾಯಿಯಂತೆ ತಮಿಳುನಾಡು ಶಿವಂಗಂಗೆ ಜಿಲ್ಲೆ ಪಲ್ಲತ್ತೂರಿನ ಸೋಲೈಮುತ್ತು ಎಂಬುವರು ಬಿಡ್ ಮಾಡಿದ್ದು ಇದರಿಂದಲೂ 1,58,529 ರೂಪಾಯಿ ಆದಾಯ ಬಂದಿದೆ. ಉದ್ದ ಕೂದಲು ಹಾಗು ತುಂಡು ಕೂದಲಿನ ಹರಾಜಿನಿಂದ ಒಟ್ಟು 1,49,40,391 ರೂ ಆದಾಯ ಹರಿದು ಬಂದಿದೆ.
ಮಲೆಮಹದೇಶ್ವರ ಕೋಟ್ಯಂತರ ಭಕ್ತರ ಆರಾಧ್ಯ ದೈವ. ಮಲೆಮಹದೇಶ್ವರಬೆಟ್ಟ ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳವೂ ಹೌದು. ಇಲ್ಲಿ ಯಾವುದೇ ಹರಕೆ ಹೊತ್ತರೆ ಈಡೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ಹಾಗಾಗಿ ತಮ್ಮ ಇಷ್ಟಾರ್ಥ ಸಿದ್ದಿಸಿದರೆ ಮಹದೇಶ್ವರನಿಗೆ ಮುಡಿ ಸೇರಿದಂತೆ ವಿವಿಧ ರೀತಿಯ ಸೇವೆ ಮಾಡಿಸುವುದಾಗಿ ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಹಾಗಾಗಿ ನಿತ್ಯ ನೂರಾರು ಮಂದಿ ಮುಡಿ ಕೊಡುತ್ತಾರೆ.
ಕೂದಲಿನ ದರದ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ್ದ ರೈತ ನಾಯಕ ಪುಟ್ಟಣ್ಣಯ್ಯ:
ಕೆಲ ವರ್ಷಗಳ ಹಿಂದೆ ರೈತ ನಾಯಕ ದಿವಂಗತ ಪುಟ್ಟಣ್ಣಯ್ಯ ಅವರು ಶಾಸಕರಾಗಿದ್ದಾಗ ವಿಧಾನಸಭೆಯಲ್ಲಿ ಕಬ್ಬು ಹಾಗು ಕೂದಲಿನ ದರ ಹೋಲಿಕೆ ಮಾಡಿ ಹಾಸ್ಯ ಚಟಾಕಿ ಹಾರಿಸಿದ್ದರು. ಒಂದು ಕೆಜಿ ಹೆಂಗಸರ ಕೂದಲಿಗೆ 5400 ರೂಪಾಯಿ, ಒಂದು ಟನ್ ಕಬ್ಬಿಗೆ 2200 ರೂಪಾಯಿ, ಸಭಾಧ್ಯಕ್ಷರೇ ಯಾವುದಾದರೂ ಕೂದಲು ಗಿಡ ಇದ್ದರೆ ರೈತರಿಗೆ ಕೊಡಿಸಿಬಿಡಿ. ಎಲ್ಲಾ ಕೆಲಸ ಬಿಟ್ಟು ಕೂದಲ ಗಿಡ ಹಾಕ್ಕೊಂಡು ಬದುಕ್ತೀವಿ ಅಂದಿದ್ದರು. ಯಾವುದಾದರೂ ಕೂದಲು ಬಿತ್ತನೆ ಬೀಜ ಇದ್ದರೆ ಕೊಡಿಸಿ. ನಮಗು ಕೆಲಸ ಮಾಡಿ ಮಾಡಿ ಸಾಕಾಗಿ ಹೋಗಿದೆ. ಕೂದಲು ವ್ಯವಸಾಯವನ್ನಾದ್ರೂ ಮಾಡ್ತೀವಿ ಎನ್ನುವ ಮೂಲಕ ಕಬ್ಬಿಗಿಂತ ಕೂದಲಿನ ದರವೇ ಹೆಚ್ಚು ಎಂದು ಅವರು ಹಾಸ್ಯ ಚಟಾಕಿ ಹಾರಿಸಿದ್ದರು.