ಮೈಸೂರಿನಲ್ಲಿ ಯೋಗ ದಿನದಂದು ಪಿಎಂ ಮೋದಿ ಜೊತೆ ಮುಖ್ಯ ವೇದಿಕೆಯಲ್ಲಿ ಐವರಿಗೆ ಮಾತ್ರ ಅವಕಾಶ

ಮೈಸೂರು, ಜೂನ್ 9: ಜೂ.21ರಂದು ಮೈಸೂರಿನ ಅರಮನೆ ಮುಂಭಾಗ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಮುಖ್ಯ ವೇದಿಕೆಯಲ್ಲಿ ನಾಲ್ಕರಿಂದ ಐದು ಜನರಿಗೆ ಮಾತ್ರ ಅವಕಾಶ ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪಸಿಂಹ, ಪ್ರಧಾನಿ ಕಾರ್ಯಾಲಯದಿಂದ ಒಂದಷ್ಟು ಮಾಹಿತಿ ಬಂದಿದೆ.
" ಯೋಗಪಟುಗಳು ಬೆಳಗ್ಗೆ 5.30ರ ಒಳಗೆ ಅರಮನೆ ಆವರಣಕ್ಕೆ ಆಗಮಿಸಬೇಕು. 6.30ರಿಂದ 7ರ ವರೆಗೆ ವೇದಿಕೆ ಕಾರ್ಯಕ್ರಮ. ಬೆಳಿಗ್ಗೆ 7 ರಿಂದ 7:45ರ ವರೆಗೆ ಪ್ರಧಾನಿ ಮೋದಿಯವರೊಂದಿಗೆ ಯೋಗ ಪ್ರದರ್ಶನ ನಡೆಯಲಿದೆ. ಜೂ.20 ರಂದೇ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಬರಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. 1 ಲಕ್ಷ ಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಅವರನ್ನು ಚಾಮುಂಡಿ ಬೆಟ್ಟ ಹಾಗೂ ಸುತ್ತೂರು ಮಠಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಜೂ.20ರ ಕಾರ್ಯಕ್ರಮ ಇನ್ನೂ ಅಧಿಕೃತವಾಗಿಲ್ಲ. ಯೋಗಪಟುಗಳ ನೋಂದಣಿ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದರು.
ತೃತೀಯಲಿಂಗಿಗಳಿಗೂ ಅವಕಾಶ
'ಮಾನವೀಯತೆಗಾಗಿ ಯೋಗ' ಎಂಬ ಶೀರ್ಷಿಕೆಯಡಿಯಲ್ಲಿ 2022ರ ಅಂತಾರಾಷ್ಟ್ರೀಯ ಯೋಗ ದಿನ ನಡೆಯಲಿದ್ದು ಸಮಾಜದ ಎಲ್ಲಾ ವರ್ಗದವರೂ ಸಹ ಇದರಲ್ಲಿ ಭಾಗವಹಿಸಬೇಕು ಎಂಬುದು ಇಚ್ಚೆಯಾಗಿದೆ. ಅದರಂತೆಯೇ ಬುಧವಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯ ಆರೋಗ್ಯ ಭವನದಲ್ಲಿ ಯೋಗ ಫಡರೇಷನ್ ವತಿಯಿಂದ ತೃತೀಯ ಲಿಂಗಿಗಳು, ಆಶಾ ಕಾರ್ಯಕರ್ತರಿಗೆ, ವಿಶೇಷಚೇತನರಿಗೆ ಯೋಗ ತರಬೇತಿ ನೀಡಲಾಯಿತು. ಇವರೆಲ್ಲರೂ ನರೇಂದ್ರ ಮೋದಿ ಅವರೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲು ತರಬೇತಿ ನೀಡಲಾಗುತ್ತಿದೆ.
ರಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್‌ನಲ್ಲಿ ಮೋದಿ ವಾಸ್ತವ್ಯ
ಪ್ರಧಾನ ಮಂತ್ರಿಗಳು ಸಾಗುವ ಮಂಡಕಳ್ಳಿ ವಿಮಾನ ನಿಲ್ದಾಣ, ನಂಜನಗೂಡು ರಸ್ತೆ, ಪ್ರಧಾನಿ ವಾಸ್ತವ್ಯ ಹೂಡಲಿರುವ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ರಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್ ಸುತ್ತಮುತ್ತಲ ರಸ್ತೆ ರಿಪೇರಿ, ಸ್ವಚ್ಛತಾ ಕೆಲಸ ಭರದಿಂದ ಸಾಗಿದೆ. ಜೂ.20ರಂದು ಸಂಜೆ ವಿಶೇಷ ವಿಮಾನದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ನರೇಂದ್ರ ಮೋದಿ ಅವರು ರಸ್ತೆಯ ಮೂಲಕ ಕಾರಿನಲ್ಲಿ ಬಂದು ರಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್‌ನಲ್ಲಿ ಅಂದು ರಾತ್ರಿ ವಾಸ್ತವ್ಯ ಹೂಡುವರು.
ಮರುದಿನ ಜೂ.21ರಂದು ಮುಂಜಾನೆ ಅರಮನೆ ಆವರಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಪ್ರಧಾನಿಗಳು, ನಂತರ ಮಾನಸ ಗಂಗೋತ್ರಿ ಆವರಣದಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೂ ಭೇಟಿ ನೀಡುವ ಸಾಧ್ಯತೆ (ಈ ಕಾರ್ಯಕ್ರಮ ಅಧಿಕೃತವಾಗಿ ನಿಗದಿ ಯಾಗಿಲ್ಲ) ಇರುವುದರಿಂದ ಎಂಜಿ ರಸ್ತೆ, ಬೋಗಾದಿ ರಸ್ತೆಗಳಲ್ಲೂ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
(ಒನ್‌ಇಂಡಿಯಾ ಸುದ್ದಿ)