ಡಿ.6ಕ್ಕೆ ನಿರ್ಧಾರವಾಗಲಿದೆ ಬಿಬಿಎಂಪಿ ಚುನಾವಣೆ ಭವಿಷ್ಯ
ಬೆಂಗಳೂರು,ನ.10- ಬಿಬಿಎಂಪಿ ಚುನಾವಣೆ ಭವಿಷ್ಯ ಡಿಸಂಬರ್ 6ಕ್ಕೆ ನಿರ್ಧಾರವಾಗಲಿದೆ. ಕಳೆದ ಹಲವಾರು ತಿಂಗಳುಗಳಿಂದ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದ ಚುನಾವಣಾ ವಿಚಾರಣೆಯನ್ನು ಡಿ.6ಕ್ಕೆ ಆರಂಭಿಸಲು ದಿನಾಂಕ ನಿಗಪಡಿಸಲಾಗಿದೆ.
ಶೀಘ್ರ ಬಿಬಿಎಂಪಿ ಚುನಾವಣೆ ನಡೆಯಬಹುದು ಎಂಬ ಆಶಾಭಾವ ಹೊರ ಹೊಮ್ಮಿದೆ. ಬಿಬಿಎಂಪಿ ಚುನಾವಣೆ ನಡೆಸಲು ಮೀನಾಮೇಷ ಏಕೆ, ನಿಮ್ಮ ನಿರ್ಧಾರ ಏನೆಂದು ನಾಲ್ಕು ವಾರದೊಳಗೆ ತಿಳಿಸಿ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿತ್ತು.
ನ್ಯಾಯಪೀಠ ವಿಧಿಸಿದ್ದ ಗಡುವು ನ.8ಕ್ಕೆ ಅಂತ್ಯಗೊಂಡಿತ್ತು. ಹೀಗಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಪ್ರತಿವಾದಿಗಳಾದ ಎಂ.ಶಿವರಾಜ್, ಅಬ್ದುಲ್ ವಾಜೀದ್ ಅವರ ಪರ ವಕೀಲರಾದ ನಿಜಾಮ್ ಪಾಷಾ ಅವರು ಚುನಾವಣೆ ವಿಚಾರಣೆ ಆರಂಭಿಸುವ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳ ಗಮನ ಸೆಳೆದಿದ್ದರು.
ವಕೀಲರ ಮನವಿಗೆ ಸ್ಪಂದಿಸಿದ ಎನ್.ವಿ.ರಮಣ ಅವರು ನಿನ್ನೆ ಚುನಾವಣೆಗೆ ಸಂಬಂಧಪಟ್ಟ ಕಡತವನ್ನು ತಮ್ಮ ಕಚೇರಿಗೆ ತರಿಸಿಕೊಂಡು ಶೀಘ್ರ ವಿಚಾರಣೆ ನಡೆಸುವ ಭರವಸೆ ನೀಡಿದ್ದರು. ವಕೀಲರಿಗೆ ನೀಡಿದ ಭರವಸೆಯಂತೆ ರಮಣ ಅವರು, ಬಿಬಿಎಂಪಿ ಚುನಾವಣಾ ಅರ್ಜಿ ವಿಚಾರಣೆಯನ್ನು ಡಿ.6ಕ್ಕೆ ನಿಗಪಡಿಸಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಾಲ್ಕು ವಾರಗಳ ಗಡುವು ನೀಡುವ ಸಂದರ್ಭದಲ್ಲೇ ಮುಂದಿನ ವಿಚಾರಣೆ ಸಂದರ್ಭದಲ್ಲೇ ಅಂತೀಮ ತೀರ್ಪು ಪ್ರಕಟಿಸುವುದಾಗಿ ಘೋಷಿಸಿತ್ತು.
ಇದೀಗ ಡಿ.6ಕ್ಕೆ ಅರ್ಜಿ ವಿಚಾರಣೆ ನಡೆಯುತ್ತಿರುವುದರಿಂದ ಬಿಬಿಎಂಪಿ ಚುನಾವಣೆ ಭವಿಷ್ಯ ಅಂದೇ ನಿರ್ಧಾರವಾಗುವ ಸಾಧ್ಯತೆಗಳಿವೆ ಎಂದು ವಕೀಲರು ತಿಳಿಸಿದ್ದಾರೆ.