ಕಾರ್ಗಲ್ ಚೆಕ್‌ಪೋಸ್ಟ್: ಪೊಲೀಸ್-ಭದ್ರತಾ ಸಿಬ್ಬಂದಿ ನಡುವೆ ನಿಲ್ಲದ ಪಾಸ್ ವಿವಾದ

ಶಿವಮೊಗ್ಗ, ಅಕ್ಟೋಬರ್ 17: ಕರ್ತವ್ಯ ನಿರತ ಪೊಲೀಸರು ತಮ್ಮ ಆವರಣ ಪ್ರವೇಶಿಸಲು ಪಾಸ್ ಪಡೆದು ಬರಬೇಕು ಎಂದು ಕರ್ನಾಟಕ ಪವರ್ ಕಾರ್ಪೊರೇಷನ್ ಭದ್ರತಾ ಸಿಬ್ಬಂದಿ ಸೂಚಿಸಿದ್ದಾರೆ. ಇದರಿಂದ ವಿವಾದ ಹುಟ್ಟಿಕೊಂಡಿದೆ. ಇವುಗಳ ಮಧ್ಯೆ ಮೊಬೈಲ್ ವಿಡಿಯೋಗಳು, ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು, ಪರ - ವಿರೋಧದ ಚರ್ಚೆಗೆ ಕಾರಣವಾಗಿದೆ.
ಸಾಗರ ತಾಲೂಕು ಕಾರ್ಗಲ್ ಬಳಿ ಕೆಪಿಸಿಎಲ್ ಚೆಕ್ ಪೋಸ್ಟ್‌ನಲ್ಲಿ ಕೆಪಿಸಿಎಲ್ ಸಿಬ್ಬಂದಿ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಕಾರ್ಗಲ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತಿರುಮಲೇಶ್ ಮತ್ತು ಸಿಬ್ಬಂದಿ ಜೀಪಿನಲ್ಲಿ ಗಸ್ತು ತಿರುಗುತ್ತಿದ್ದರು.
ಈ ಸಂದರ್ಭ ಕರ್ನಾಟಕ ಪವರ್ ಕಾರ್ಪೊರೇಷನ್ (ಕೆಪಿಸಿಎಲ್) ಭದ್ರತಾ ಸಿಬ್ಬಂದಿ ತಮ್ಮ ಆವರಣ ಪ್ರವೇಶಿಸಲು ಪಾಸ್ ಬೇಕು ಎಂದು ಕೇಳಿದ್ದಾರೆ. ಆಗ ಮಾತಿನ ಚಕಮಕಿ ನಡೆದಿದೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪೊಲೀಸ್ ಸಿಬ್ಬಂದಿ ಹೇಳೋದೇನು?ಕೆಪಿಸಿಎಲ್ ಆವರಣ ಪ್ರವೇಶಿಸಲು ಪಾಸ್ ಕಡ್ಡಾಯವೆಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. 'ಆವರಣದೊಳಗೆ ಹೋಗಲು ಪಾಸ್ ಬೇಕು. ಕೆಪಿಸಿಎಲ್ ಹಿರಿಯ ಅಧಿಕಾರಿಗಳಿಂದ ಪಾಸ್ ಪಡೆದು ಬರಬೇಕು. ಪೊಲೀಸರು ಒಳ ಪ್ರವೇಶಿಸಬೇಕಿದ್ದರೆ, ತಮ್ಮ ವಾಕಿ ಟಾಕಿ ಮೂಲಕ ಹಿರಿಯ ಅಧಿಕಾರಿಗಳನ್ನು ವಿಚಾರಿಸಬೇಕಾಗುತ್ತದೆ. ಅವರು ಒಳಗೆ ಬಿಡುವಂತೆ ಸೂಚಿಸಿದರೆ ಮಾತ್ರ ಬಿಡುತ್ತೇವೆ' ಎಂದು ಸೆಕ್ಯೂರಿಟಿ ಗಾರ್ಡ್ ತಿಳಿಸಿದ್ದಾರೆ.
ಈ ವೇಳೆ ಕಾರ್ಗಲ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತಿರುಮಲೇಶ್ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ತಿರುಮಲೇಶ್, 'ಪೊಲೀಸರು ಕರ್ತವ್ಯ ನಿಮಿತ್ತ ಬಂದಾಗ ಪಾಸ್ ಪಡೆದು ಬರಬೇಕಾ. ಸಮವಸ್ತ್ರ ಧರಿಸಿ ಬಂದ ಪೊಲೀಸರನ್ನು ತಡೆಯುವಂತಿಲ್ಲ. ಒಳ ಬಿಡಲು ಪಾಸ್ ಬೇಕು ಎಂಬ ಆದೇಶ ಪ್ರತಿ ಇದ್ದರೆ ತೋರಿಸಿ. ನಾವು ಒಳಗೆ ಬರುವುದಿಲ್ಲ' ಎಂದಿದ್ದಾರೆ.
ಭದ್ರತಾ ಸಿಬ್ಬಂದಿಯನ್ನು ತಳ್ಳಿದ
ಕೆಪಿಸಿಎಲ್ ಭದ್ರತಾ ಸಿಬ್ಬಂದಿ ಮತ್ತು ಸಬ್ ಇನ್ಸ್‌ಪೆಕ್ಟರ್ ತಿರುಮಲೇಶ್ ಅವರು ಮಾತನಾಡಿರುವ ವಿಡಿಯೋಗಳ ನಡುವೆ ಸಿಸಿಟಿವಿ ದೃಶ್ಯಾವಳಿಯೊಂದು ವೈರಲ್ ಆಗಿದೆ. ಇದು ಕೆಪಿಸಿಎಲ್ ಚೆಕ್ ಪೋಸ್ಟ್‌ನಲ್ಲಿ ಅಳವಡಿಸಿರುವ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯದಲ್ಲಿ ತಿರುಮಲೇಶ್ ಭದ್ರತಾ ಸಿಬ್ಬಂದಿಯನ್ನು ತಳ್ಳಿರುವ ದೃಶ್ಯವಿದೆ.
ಪೊಲೀಸರು ಮತ್ತು ಕೆಪಿಸಿಎಲ್ ಭದ್ರತಾ ಸಿಬ್ಬಂದಿ ನಡುವಿನ ಸಂಘರ್ಷ ಇದೆ ಮೊದಲಲ್ಲ. ಕೆಪಿಸಿಎಲ್ ಆವರಣ ಅತ್ಯಂತ ಸೂಕ್ಷ್ಮ ಪ್ರದೇಶ. ಇದೆ ಕಾರಣಕ್ಕೆ ಸಾರ್ವಜನಿಕ ಪ್ರವೇಶಕ್ಕೆ ನಿಷೇಧವಿದೆ. ಆದರೆ ಕರ್ತವ್ಯ ನಿರತ ಪೊಲೀಸರನ್ನು ಕೂಡ ಇಲ್ಲಿ ಬಿಡುವುದಿಲ್ಲ ಎಂಬ ಆರೋಪವಿದೆ. ಈ ಹಿಂದೆಯೂ ಹಲವು ಭಾರಿ ಪೊಲೀಸರನ್ನು ತಡೆದು, ಪಾಸ್ ಕೇಳಿ, ಹಿಂದಕ್ಕೆ ಕಳುಹಿಸಲಾಗಿದೆ ಎಂಬ ಆರೋಪವಿದೆ.
ಏನಿದು ಕೆಪಿಸಿಎಲ್..? ಇಲ್ಲಿನ ಸಮಸ್ಯೆಯೇನು..?
ಕೆಪಿಸಿಎಲ್ ಅಧಿಕಾರಿಗಳು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಈ ಹಿಂದೆ ಶಾಸಕ ಹರತಾಳು ಹಾಲಪ್ಪ ಅವರು ಧರಣಿ ನಡೆಸಿದ್ದರು. ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ನೀರು ಪೂರೈಕೆಗೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂದು ಕಾರ್ಗಲ್ ಕೆಪಿಸಿಎಲ್ ಕಚೇರಿ ಮುಂಭಾಗ ಧರಣಿ ಮಾಡಿದ್ದರು.
ಶರಾವತಿ ಹಿನ್ನೀರು ಭಾಗದಲ್ಲಿ ಜಲವಿದ್ಯುತ್ ಉತ್ಪಾದಿಸಲಾಗುತ್ತದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವತಿಯಿಂದ ವಿದ್ಯುತ್ ಉತ್ಪಾದನೆ ಕಾರ್ಯ ನಡೆಸಲಾಗುತ್ತಿದೆ. ಹಾಗಾಗಿ ವಿದ್ಯುತ್ ಉತ್ಪಾದನಾ ಕೇಂದ್ರ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಕೆಪಿಸಿಎಲ್ ಸಿಬ್ಬಂದಿ ಹೊರತು ಉಳಿದವರಾರಿಗೂ ಇಲ್ಲಿ ಪ್ರವೇಶವಿಲ್ಲ.
ಪಾಸ್ ಇಲ್ಲದೇ ಇದ್ರೆ ನೋ ಎಂಟ್ರಿ
ಕೆಪಿಸಿಎಲ್ ವ್ಯಾಪ್ತಿ ಅಂಚಿನಲ್ಲಿ ಹಲವು ಗ್ರಾಮಗಳಿವೆ. ವಡನಬೈಲು, ಸುಂಕದ ಮನೆ, ಮರಾಠಿ ಕ್ಯಾಂಪ್ ಸೇರಿದಂತೆ ಒಂದೆರಡು ಗ್ರಾಮಗಳಿಗೆ ಕೆಪಿಸಿ ವ್ಯಾಪ್ತಿಯ ರಸ್ತೆಯಲ್ಲೇ ಸಂಚರಿಸಬೇಕು. ಇಲ್ಲಿಯ ನಿವಾಸಿಗಳು ಕೆಪಿಸಿಎಲ್ ಜಾಗದಿಂದ ಹಾದು ಹೋಗಲು ಪಾಸ್ ಪಡೆಯಬೇಕು. ಇದೆ ಕಾರಣಕ್ಕೆ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇನ್ನು, ವಡನಬೈಲು ಪದ್ಮಾವತಿ ದೇವಿ ದೇವಸ್ಥಾನ ಜೈನರ ಪ್ರಮುಖ ಆರಾಧನ ಕೇಂದ್ರ. ಇಲ್ಲಿಗೆ ಬರುವ ಭಕ್ತರು ಕೂಡ ಪಾಸ್ ಪಡೆಯುವುದು ಕಡ್ಡಾಯವಾಗಿದೆ.
ಈ ಗ್ರಾಮಗಳು ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರಲಿವೆ. ಇಲ್ಲಿ ಬಂದೋಬಸ್ತ್ ಮತ್ತು ಗಸ್ತು ತಿರುಗಲು ಪೊಲೀಸರು ಸಂಚರಿಸಬೇಕು. ಆದರೆ ನಿತ್ಯ ಪಾಸ್ ಪಡೆಯಲು ಸಾಧ್ಯವೇ ಎನ್ನುವುದು ಪೊಲೀಸರ ವಾದ. ಇನ್ನು ಪಾಸ್ ಇಲ್ಲದೇ ಯಾರನ್ನೂ ಒಳಗೆ ಬಿಡುವಂತಿಲ್ಲ ಎನ್ನುವುದು ಕೆಪಿಸಿಎಲ್ ಭದ್ರತಾ ಸಿಬ್ಬಂದಿಯ ಪಟ್ಟು. ಈ ವಿವಾದ ಈ ಸ್ಫೋಟಗೊಂಡಿದೆ.