ಸೂರ್ಯ ನನ್ನ ಬ್ಯಾಟಿಂಗ್ ನೋಡಿಲ್ಲ: ದ್ರಾವಿಡ್ ಚಟಾಕಿ

ರಾಜ್‌ಕೋಟ್: “ಸೂರ್ಯ ಕುಮಾರ್ ಯಾದವ್ ಬಾಲ್ಯದಲ್ಲಿ ನನ್ನ ಬ್ಯಾಟಿಂಗ್ ನೋಡಿಲ್ಲ. ನೋಡಿದ್ದೇ ಆದರೆ ಅವರು ಇಷ್ಟೊಂದು ಬಿರುಸಿನ ಬ್ಯಾಟಿಂಗ್ ಮಾಡುತ್ತಿರಲಿಲ್ಲ’ ಎಂಬು ದಾಗಿ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಚಟಾಕಿ ಹಾರಿಸಿದ್ದಾರೆ!
ರಾಜ್‌ಕೋಟ್ ಟಿ20 ಪಂದ್ಯ ಮುಗಿದ ಬಳಿಕ ರಾಹುಲ್ ದ್ರಾವಿಡ್ ಮತ್ತು ಸೂರ್ಯಕುಮಾರ್ ಯಾದವ್ ಲೈವ್ ಚಾಟ್ ಒಂದರಲ್ಲಿ ಪಾಲ್ಗೊಂಡಿದ್ದರು.
ಇದು ಬಹಳ ತಮಾಷೆಯಾಗಿ ಸಾಗಿತು. “ಇಲ್ಲಿ ನನ್ನೊಂದಿಗೆ ಒಬ್ಬರಿ ದ್ದಾರೆ. ಅವರು ಚಿಕ್ಕವರಾಗಿದ್ದಾಗ ಖಂಡಿತ ನನ್ನ ಬ್ಯಾಟಿಂಗ್ ನೋಡಿಲ್ಲ ಎಂಬುದು ನನಗೆ ಖಾತ್ರಿಯಾಗಿದೆ. ನೋಡಿದ್ದೇ ಆದರೆ ಇಷ್ಟೊಂದು ಬಿರು ಸಿನ ಆಟ ಸಾಧ್ಯವಿರುತ್ತಿರಲಿಲ್ಲ’ ಎಂದು ರಾಹುಲ್ ದ್ರಾವಿಡ್ ಕಾಲೆಳೆದರು.
ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್, “ಇಲ್ಲ. ನಾನು ಚಿಕ್ಕವನಾಗಿದ್ದಾಗ ನಿಮ್ಮ ಬ್ಯಾಟಿಂಗ್ ಕಂಡಿದ್ದೇನೆ’ ಎಂದರು. ಮತ್ತೆ ಕಾಲೆಳೆದ ದ್ರಾವಿಡ್, “ಇಲ್ಲ, ನೀವು ನೋಡಿಲ್ಲ ಎಂದು ನಾನು ಭಾವಿಸುತ್ತೇನೆ. ನಿಮ್ಮ ಇಂದಿನ ಆಟ ಕಂಡಾಗ ಇದು ಖಾತ್ರಿಯಾಗಿದೆ’ ಎಂದರು.
ಬಳಿಕ ಮಾತು ಮುಂದುವರಿಸಿದ ದ್ರಾವಿಡ್, “ನೀವೋರ್ವ ಅಸಾಮಾನ್ಯ ಕ್ರಿಕೆಟಿಗ. ಪ್ರತೀ ಸಲವೂ ನಿಮ್ಮ ಬ್ಯಾಟಿಂಗ್ ನೋಡುವುದು ಅತ್ಯಂತ ಖುಷಿ ಕೊಡುತ್ತದೆ. ಇದಕ್ಕಿಂತ ಉತ್ತಮ ಟಿ20 ಇನ್ನಿಂಗ್ಸ್ ನಾನು ಕಂಡಿಲ್ಲ. ಮುಂದೆ ಇದಕ್ಕೂ ಚೆನ್ನಾಗಿ ಆಡಲಿರುವಿರಿ…’ ಎಂದು ಪ್ರಶಂಸಿಸಿದರು.
ನೋ ಲುಕ್ ಶಾಟ್
ಸೂರ್ಯಕುಮಾರ್ ಯಾದವ್ ಅವರದು ಪಕ್ಕಾ ಅಸಾಂಪ್ರದಾಯಿಕ ಹೊಡೆತಗಳು. ಕ್ರಿಕೆಟ್ ಪುಸ್ತಕದಲ್ಲಿ ಇವು ಕಾಣಸಿಗುವುದು ವಿರಳ. ಇವರು ಎದ್ದು, ಬಿದ್ದು ಚೆಂಡನ್ನು ಬಡಿದಟ್ಟುವ ರೀತಿ ವೀಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ರಾಜ್‌ಕೋಟ್‌ನಲ್ಲಿ ಮತ್ತೂಮ್ಮೆ ಇದರ ವಿರಾಟ್ ದರ್ಶನವಾಯಿತು. ಆಫ್ಸ್ಟಂಪ್‌ನಿಂದಾಚೆ ಹೋಗುತ್ತಿದ್ದ ಹೈ ಫುಲ್‌ಟಾಸ್ ಒಂದನ್ನು ಸಿಕ್ಸರ್‌ಗೆ ಬಡಿದಟ್ಟಿದ ರೀತಿಯನ್ನು ಮರೆಯಲುಂಟೇ!
ಸೂರ್ಯ ಅವರ ಮುಂದಿನ ಹೊಡೆತ “ನೋ ಲುಕ್ ಶಾಟ್’. ಇದನ್ನು “ಮರಿ ಎಬಿಡಿ’ ಎಂದೇ ಖ್ಯಾತರಾಗಿರುವ 19 ವರ್ಷದ ಡಿವಾಲ್ಡ್ ಬ್ರೇವಿಸ್ ಬಾರಿಸುತ್ತಾರೆ. ಹೇಳಿ ಕೇಳಿ ಇಬ್ಬರೂ ಮುಂಬೈ ಇಂಡಿಯನ್ಸ್ ಆಟಗಾ ರರು. ಇದೀಗ ಬ್ರೇವಿಸ್ ಬಳಿ ಈ ಶಾಟ್ ಬಾರಿಸುವುದನ್ನು ಕಲಿತುಕೊಳ್ಳ ಬೇಕೆಂದು ಸೂರ್ಯ ಹೇಳಿಕೊಂಡಿದ್ದಾರೆ.
ಇವರಿಬ್ಬರ ವೀಡಿಯೋ ಸಂಭಾಷಣೆ ಯನ್ನು ಮುಂಬೈ ಇಂಡಿಯನ್ಸ್ ಹಂಚಿಕೊಂಡಿದೆ.
“ಇದು ನನಗೆ ಸಂದ ಗೌರವ. ಆದರೆ ನಾನು ನಿಮ್ಮಿಂದ ಬಹಳಷ್ಟು ಹೊಡೆತ ಗಳನ್ನು ಬಾರಿಸಲು ಕಲಿಯ ಬೇಕಿದೆ’ ಎಂದು ಬ್ರೇವಿಸ್ ಹೇಳಿಕೊಂಡಿದ್ದಾರೆ.