ಚುನಾವಣಾ ಪ್ರಚಾರಕ್ಕೆ ಸಿನೆಮಾ ನಟರನ್ನು ಬಳಸಿಕೊಳ್ಳುತ್ತಿರುವ ಅಭ್ಯರ್ಥಿಗಳ ವಿರುದ್ಧ ಕ್ರಮ ಜರುಗಿಸಲು ಆಗ್ರಹ

ಬೆಂಗಳೂರು, ಎ.5: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರವನ್ನು ಮಾಡಲಿರುವ ಸಿನೆಮಾ ನಟ ಅಥವಾ ನಟಿಯರ ಆದಾಯವನ್ನು ಪರಿಶೀಲಿಸಬೇಕು ಹಾಗೂ ಅವರಿಗೆ ನೀಡುರುವ ಶುಲ್ಕವನ್ನು ಅಭ್ಯರ್ಥಿಗಳ ಚುನಾವಣಾ ಖರ್ಚಿನ ಬಾಬ್ತಿಗೆ ಸೇರಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಒತ್ತಾಯಿಸಿದೆ.
ಮಂಗಳವಾರ ಈ ಕುರಿತು ಮುಖ್ಯ ಚುನಾವಣಾಧಿಕಾರಿಗೆ ಪಕ್ಷದ ಕಾರ್ಯದರ್ಶಿ ರಘು ಜಾಣಗೆರೆ ಅವರು ಪತ್ರವನ್ನು ಬರೆದಿದ್ದು, ಪಕ್ಷಗಳ ಸಮಾವೇಶಗಳಿಗೆ, ಚುನಾವಣಾ ಪ್ರಚಾರಕ್ಕೆ ಸಿನೆಮಾ ತಾರೆಯರನ್ನು ಅಭ್ಯರ್ಥಿಗಳು ಕರೆಸುತ್ತಿದ್ದಾರೆ. ಯಾವುದೇ ಪರಿಚಯವಿಲ್ಲದ ಮತ್ತು ಆಪ್ತರೂ ಅಲ್ಲದ ಸೆಲೆಬ್ರಿಟಿಗಳು ಮತ್ತು ಸಿನೆಮಾ ತಾರೆಗಳು ಶುಲ್ಕವಿಲ್ಲದೆ ಇಂತಹ ಸಭೆಗಳಲ್ಲಿ ಭಾಗವಹಿಸುವುದಿಲ್ಲ. ಇದು ಒಂದು ರೀತಿಯಲ್ಲಿ ಮತದಾರರನ್ನು ಓಲೈಸುವ ಕೃತ್ಯವಾಗಿದೆ. ಹಾಗಾಗಿ ಆಯೋಗವು ಇಂತಹದ ಮೇಲೆ ನಿಗಾ ಇಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಗಡಿ ಭಾಗದಲ್ಲಿ ಇಂತಹ ಪ್ರಚಾರಗಳು ಹೆಚ್ಚಾಗಿ ನಡೆಯುತ್ತಿದ್ದು, ತೆಲುಗು ನಟರನ್ನೂ ಪ್ರಚಾರಕ್ಕೆ ಕರೆತರಲಾಗುತ್ತಿದೆ. ಜನರನ್ನು ಸೇರಿಸುವ ಉದ್ದೇಶದಿಂದಲೇ ಲಕ್ಷಾಂತರ ರೂಪಾಯಿಗಳ ಕಪ್ಪುಹಣವನ್ನು ಕೊಟ್ಟು ಭ್ರಷ್ಟ ರಾಜಕಾರಣಿಗಳು ಪರಭಾಷಾ ನಟರನ್ನು ಕರೆಸಲಾಗುತ್ತಿದೆ. ಹಾಗಾಗಿ ಇದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ