ಕೊರೋನಾ ಹೆಚ್ಚಳ: ಸಂಸತ್ ಬಜೆಟ್ ಅಧಿವೇಶನ; ಎರಡು ಸದನಗಳು ಪಾಳಿಯಲ್ಲಿ ಕಾರ್ಯನಿರ್ವಹಣೆ ಸಾಧ್ಯತೆ

ನವದೆಹಲಿ: ಕೊರೋನಾ ಹೆಚ್ಚಳದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳ ಮತ್ತು 400ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವುದರಿಂದ ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕಾಗಿ ಉಭಯ ಸದನಗಳ(ರಾಜ್ಯಸಭೆ ಮತ್ತು ಲೋಕಸಭೆ) ಪಾಳಿಯಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಅನಾಮಧೇಯತೆಯ ಷರತ್ತಿನ ಮೇಲೆ ಎಎನ್‌ಐಗೆ ತಿಳಿಸಿವೆ. ಆದ್ದರಿಂದ ಮುಂಬರುವ ಮೊದಲಾರ್ಧದಲ್ಲಿ ಸದನಗಳನ್ನು ಪಾಳಿಯಲ್ಲಿ ನಡೆಸಲು ಸಂಸದೀಯ ವ್ಯವಹಾರಗಳ ಸಚಿವಾಲಯ ಪ್ರಸ್ತಾವನೆಯನ್ನು ಕಳುಹಿಸಿದೆ. ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಫೆಬ್ರವರಿ ಎರಡನೇ ವಾರದವರೆಗೆ ಮುಂದುವರಿಯುತ್ತದೆ.
ಏತನ್ಮಧ್ಯೆ, ಚಳಿಗಾಲದ ಅಧಿವೇಶನ 2021ರ ನವೆಂಬರ್ 20 ರಂದು ಪ್ರಾರಂಭವಾಗಿ ಡಿಸೆಂಬರ್ 23ರವರೆಗೆ ಮುಂದುವರೆಯಿತು. ಕಾರಣ ಆ ಸಮಯದಲ್ಲಿ ಕೊರೋನಾ ಇಳಿಮುಖವಾಗಿತ್ತು. ಬಜೆಟ್ ಅಧಿವೇಶನವು ಕೊರೋನಾ ಹೆಚ್ಚಳದ ನಂತರ ಹಿಂದಿನ ಅವಧಿಗಳಲ್ಲಿ ಬಳಸಿದ ಆರೋಗ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನೇ ಅನುಕರಿಸುತ್ತದೆ.
ಸಂಸದೀಯ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಯನ್ನು ಸರ್ಕಾರವು ಅನುಮೋದಿಸಿದರೆ ನಂತರ ಎರಡೂ ಸದನಗಳು: ಲೋಕಸಭೆ ಮತ್ತು ರಾಜ್ಯಸಭೆಗಳು ಪಾಳಿವಾರು ಕಾರ್ಯನಿರ್ವಹಿಸುತ್ತವೆ. ರಾಜ್ಯಸಭೆಯು ಬೆಳಿಗ್ಗೆ 9 ರಿಂದ ಪ್ರಾರಂಭವಾಗಿ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ಲೋಕಸಭೆ ಅಧಿವೇಶನ ಎರಡನೇ ಪಾಳಿ 3 ಗಂಟೆಯಿಂದ ಆರಂಭವಾಗಲಿದ್ದು ಬಜೆಟ್ ದಿನವನ್ನು ಹೊರತುಪಡಿಸಿ ರಾತ್ರಿ 8 ರವರೆಗೆ ಮುಂದುವರಿಯುತ್ತದೆ. ಬಜೆಟ್ ದಿನದಂದು ಲೋಕಸಭೆಯು ಮೊದಲ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.