ಗೋವಾ ಸಿಎಂ ಯಾರಾಗುತ್ತಾರೆ ಎಂಬುದು ಇನ್ನೂ ಸಸ್ಪೆನ್ಸ್
ಪಣಜಿ, ಮಾ.21- ಹನ್ನೊಂದು ದಿನಗಳ ನಂತರ ಬಹು ನಿರೀಕ್ಷಿತ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಇಂದು ನಡೆಸಲಿದ್ದು, ಗೋವಾದ ಮುಂದಿನ ಮುಖ್ಯಮಂತ್ರಿ ಯಾರೆಂಬುದರ ಕುರಿತಾದ ಸಸ್ಪೆನ್ಸ್ ಕೊನೆಗೊಳ್ಳಲಿದೆ.ಇಂದೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದೆ.
ರಾಜ್ಯ ವಿಧಾನ ಸಭೆಯ 40 ಸದಸ್ಯರ ಸದನದಲ್ಲಿ 20 ಸ್ಥಾನಗಳನ್ನು ಪಡೆದಿದ್ದು ಬಿಜೆಪಿ ಸರ್ಕಾರ ರಚನೆಗೆ ಎಂಜಿಪಿಯ ಇಬ್ಬರು ಶಾಸಕರು ಮತ್ತು ಮೂವರು ಪಕ್ಷೇತರ ಶಾಸರರು ಬೆಂಬಲವನ್ನು ಘೋಷಿಸಿದ್ದಾರೆ. ಬಿಜೆಪಿ ನಾಯಕ ಮತ್ತು ನಿಯೋಜಿತ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಿಎಂ ಹುದ್ದೆಗೆ ಸ್ಪಷ್ಟ ಅಚ್ಚುಮೆಚ್ಚಿನವರಾಗಿದ್ದರೂ ಸ್ವಲ್ಪ ವಿರೋಧವನ್ನು ಎದುರಿಸುತ್ತಿದ್ದಾರೆ.
ಸಾವಂತ್ ಜೊತೆಗೆ ಮಾಜಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮತ್ತು ಗೋವಾ ಮೂಲದ ಹಿಮಾಚಲ ಪ್ರದೇಶ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರ ಹೆಸರುಗಳು ಸಿಎಂ ಸ್ಥಾನಕ್ಕೆ ಚರ್ಚೆಯಾಗುತ್ತಿವೆ ಎಂದು ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಗೋವಾದಲ್ಲಿ ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭವು ಮಾರ್ಚ್ 25ರೊಳಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಬಿಜೆಪಿ ನಾಯಕರು ಉಪಸ್ಥಿತರಿರುತ್ತಾರೆ ಎಂದು ಗೋವಾ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಡೆ ಹೇಳಿದ್ದಾರೆ.
ಬಿಜೆಪಿಯ ಕೇಂದ್ರ ವೀಕ್ಷಕರಾಗಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ಮತ್ತು ಎಲ್ ಮುರುಗನ್ ಇಂದು ಮಧ್ಯಾಹ್ನ ಪಣಜಿಗೆ ಆಗಮಿಸಲಿದ್ದು, ರಾಜ್ಯ ರಾಜಧಾನಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂಜೆ 4 ಗಂಟೆಗೆ ಪ್ರಾರಂಭವಾಗಲಿರುವ ನಿರ್ಣಾಯಕ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲಿದ್ದಾರೆ
ಮುಂದಿನ ಮುಖ್ಯಮಂತ್ರಿ ಯಾರೆಂದು ಆಯ್ಕೆ ಮಾಡಿದ ನಂತರ, ಬಿಜೆಪಿ ನಾಯಕರು ಸಂಜೆ 6 ಗಂಟೆಗೆ ರಾಜ್ಯಪಾಲ ಪಿ ಎಸ್ ಶ್ರೀಧರನ್ ಪಿಳ್ಳೈ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಗೋವಾ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವಿಸï, ಸಿಟಿ ರವಿ ಮತ್ತು ತನವಡೆ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಜೆ 5 ಗಂಟೆಯೊಳಗೆ ಮುಂದಿನ ಸಿಎಂ ಹೆಸರನ್ನು ಪ್ರಕಟಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.