ಹಾಲು ಉತ್ಪಾದನೆ ಕುಸಿತ

ದೊಡ್ಡಬಳ್ಳಾಪುರ: ಮೂರು ದಿನಗಳ ಹಿಂದೆ ನಗರದ ಬಹುತೇಕ ನಂದಿನಿ ಹಾಲಿನ ಕೇಂದ್ರಗಳಲ್ಲಿ ಗ್ರಾಹಕರಿಗೆ ಹಾಲು ದೊರೆಯದೆ ಪರದಾಡುವಂತಾಗಿತ್ತು. ಒಂದು ಲೀಟರ್ ಹಾಲು ಖರೀದಿಸುತ್ತಿದ್ದ ಗ್ರಾಹಕರಿಗೆ ಅರ್ಧ ಲೀಟರ್ ಮಾತ್ರ ನೀಡಲಾಯಿತು. ಹಾಲು ಅಗತ್ಯ ಇದ್ದರೆ ಮಧ್ಯಾಹ್ನ 2 ಗಂಟೆಯ ನಂತರ ಬನ್ನಿ ಎಂದು ನಂದಿನಿ ಹಾಲಿನ ಕೇಂದ್ರದವರು ಗ್ರಾಹಕರಿಗೆ ಹೇಳಿ ಕಳುಹಿಸಿದರು.
'ಪ್ರತಿ ದಿನ ನಂದಿನಿಯ ವಿವಿಧ ಬ್ರ್ಯಾಂಡ್‌ಗಳ 20 ಕ್ರೇಟ್ ಹಾಲು ತರಿಸಲಾಗುತಿತ್ತು. ಆದರೆ ಮೂರು ದಿನಗಳ ಹಿಂದೆ ನಮಗೆ ಪೂರೈಕೆಯಾಗಿದ್ದು 8 ಕ್ರೇಟ್ ಮಾತ್ರ. ಕಾಯಂ ಗ್ರಾಹಕರಿಗೂ ಹಾಲಿನ ಪ್ಯಾಕೇಟ್ ನೀಡುವುದು ಕಷ್ಟವಾಗಿತ್ತು. ನಮ್ಮ ಬೇಡಿಕೆಯಷ್ಟು ಹಾಲು ಪೂರೈಕೆ ಮಾಡುವಂತೆ ಮನವಿ ಮಾಡಲಾಯಿತು. ನಮ್ಮ ಮನವಿಗೆ ಬಂದ ಉತ್ತರ 'ಹಾಲಿನ ಪೂರೈಕೆ ಗಣನೀಯ ಸಂಖ್ಯೆಯಲ್ಲಿ ಕುಸಿತವಾಗಿದೆ. ಒಂದೆರಡು ದಿನಗಳಲ್ಲಿ ಪೂರೈಕೆ ಸಹಜ ಸ್ಥಿತಿಗೆ ಬರಲಿದೆ' ಎಂದು ನಮ್ಮ ಮೋಬೈಲ್‌ಗಳಿಗೆ ಮೆಸೇಜ್ ಬಂತು' ಎನ್ನುತ್ತಾರೆ ಎಪಿಎಂಸಿ ಸಮೀಪದ ನಂದಿನಿ ಹಾಲಿನ ಕೇಂದ್ರದ ಮಾಲೀಕ ಶಿವಕುಮಾರ್.
ತಾಲ್ಲೂಕಿನಲ್ಲಿ ಕೃಷಿಯೊಂದಿಗೆ ಉಪಕಸುಬಾಗಿದ್ದ ಹೈನುಗಾರಿಕೆ ಬಹುತೇಕ ರೈತರ ಮುಖ್ಯಕಸುಬು ಆಗಿಯೂ ರೂಪುಗೊಂಡಿತ್ತು. ಗ್ರಾಮೀಣ ಪ್ರದೇಶದ ಆರ್ಥಿಕತೆಯೇ ಇಂದು ಹೈನುಗಾರಿಕೆಯ ಮೇಲೆ ಅವಂಲಂಭಿತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಿಂಗಳ 1ನೇ ಹಾಗೂ 15ನೇ ದಿನಾಂಕ ಬರುತ್ತಿದ್ದಂತೆ ದಿನಸಿ ಅಂಗಡಿಗಳ ಬಾಕಿ ಪಾವತಿ, ಸ್ತ್ರೀ ಶಕ್ತಿ ಸಂಘಗಳಲ್ಲಿ ಪಡೆದ ಸಾಲ ಮರುಪಾವತಿ, ಮಕ್ಕಳ ಶಾಲಾ ಶುಲ್ಕ ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳು ನಡೆಯುವುದು ಹಾಲಿನ ಡೇರಿಯ ಬಿಲ್ ಪಾವತಿ ನಂತರವೇ.
ಹೈನುಗಾರಿಕೆಯ ಮೇಲೆ ಇಷ್ಟೇಲ್ಲಾ ಆರ್ಥಿಕ ಚಟುವಟಿಕೆಗಳು ಅವಲಂಬಿತವಾಗಿರುವ ಸಂದರ್ಭದಲ್ಲಿ ನಂದಿನಿ ಹಾಲಿನ ಕೇಂದ್ರದಲ್ಲಿ ಹಣ ನೀಡಿದರೂ ಹಾಲು ದೊರೆಯದೇ ಗ್ರಾಹಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದು ಏಕೆ ? ಹಾಲಿನ ಕೊರತೆ ಮತ್ತೆ ಸರಿಯಾಗಿದ್ದು ಹೇಗೆ ಎನ್ನುವ ಹಲವಾರು ಪ್ರಶ್ನೆಗಳು ಸಹಜವಾಗಿಯೇ ಈಗ ಗ್ರಾಹಕರನ್ನು ಕಾಡುತ್ತಿದೆ.
ಹಸು ಸಾಕಣಿಕೆ ಇಳಿಮುಖ
ಬಹುತೇಕ ರೈತರು ಹಸುಗಳನ್ನು ಡೈರಿಗಳ ಸಮೀಪವೇ ಕರೆತಂದು ಎಲ್ಲರ ಸಮ್ಮುಖದಲ್ಲೇ ಹಾಲು ಕರೆದರು 3.5 ರಷ್ಟು ಫ್ಯಾಟ್ ಬರುತ್ತಿಲ್ಲ. ಹೀಗಾಗಿ ರೈತರು ರಾಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಚ್ಚಹಳ್ಳಿಯಲ್ಲಿ 55 ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದವು. ಆದರೆ ಆರು ತಿಂಗಳಿಂದ ಈಚೆಗೆ ಈ ಸಂಖ್ಯೆ 40ಕ್ಕೆ ಇಳಿದಿದೆ. ಇದು ಇನ್ನೂ ಕಡಿಮೆಯಾಗುವ ನಿರೀಕ್ಷೆ ಇದೆ. ಹಾಲಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಹಲವು ವರ್ಷಗಳಿಂದ ರೈತರು ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಈ ಬಗ್ಗೆ ಯಾರೊಬ್ಬರು ಗಮನವನ್ನೇ ನೀಡುತ್ತಿಲ್ಲ. ಹಾಲಿನ ಗುಣಮಟ್ಟದ ಫ್ಯಾಟ್ 3.5 ಇದ್ದರೆ ಮಾತ್ರ ಒಂದು ಲೀಟರ್‌ಗೆ ₹30 ಬಮೂಲ್ ಹಾಲಿನ ಬೆಲೆ, ₹5 ಸರ್ಕಾರದ ಸಹಾಯಧನ ಬರಲಿದೆ. ಫ್ಯಾಟ್ ಕಡಿಮೆಯಾದರೆ ₹25 ಬರಲಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಲು ಶಿಥಲ ಕೇಂದ್ರಕ್ಕೆ ಎಲ್ಲಾ 201 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿ ದಿನ 98 ಸಾವಿರ ಲೀಟರ್ ಹಾಲು ಸಂಗ್ರಹವಾಗುತಿತ್ತು. ಒಂದುವರೆ ತಿಂಗಳಿಂದ ಈಚೆಗೆ 90 ಸಾವಿರ ಲೀಟರ್‌ಗೆ ಕುಸಿತವಾಗಿದೆ. ಇದು ಬೇಸಿಗೆಯಲ್ಲಿನ ಮೇವಿನ ಕೊರತೆಯಿಂದ ಮಾತ್ರ ಆಗಿಲ್ಲ. ಚರ್ಮಗಂಟು ರೋಗ, ರಾಗಿ ಕೊಯ್ಲು ಯಂತ್ರದ ಮೂಲಕ ನಡೆಯುತ್ತಿರುವುದರಿಂದ ಹೊಲದಲ್ಲೇ ರಾಗಿ ಹುಲ್ಲು ಹೆಚ್ಚು ಪುಡಿಯಾಗುತ್ತಿದೆ. ಇದರಿಂದ ರಾಸುಗಳು ಸರಿಯಾಗಿ ಮೇವು ತಿನ್ನದಂತೆ ಆಗಿರುವುದು ಕಾರಣವಾಗಿದೆ.
2020ರಲ್ಲಿ ಪಶುಸಂಗೋಪನ ಇಲಾಖೆಯಿಂದ ತಾಲ್ಲೂಕಿನಲ್ಲಿ ನಡೆಸಿರುವ ರಾಸುಗಳ ಗಣತಿಗೂ ಇತ್ತೀಚೆಗೆ ಚರ್ಮಗಂಟು ತಡೆಗೆ ಲಸಿಕೆ ನೀಡಿರುವ ಅಂಕಿ ಅಂಶಕ್ಕೂ ಹೋಲಿಕೆ ಮಾಡಿದರೆ 10 ಸಾವಿರ ರಾಸುಗಳ ಸಂಖ್ಯೆ ಕಡಿಮೆಯಾಗಿದೆ. ಈ ಪ್ರಮಾಣ ಕುಸಿತವಾಗುತ್ತಲೇ ಇದೆ ಎನ್ನುತ್ತಾರೆ ಪಶು ವೈದ್ಯರು.
ತಾಲ್ಲೂಕಿನ ಮಟ್ಟಿಗೆ ಸಾಸಲು ಹೋಬಳಿ ಹೊರತು ಪಡಿಸಿದರೆ ಉಳಿದ ಯಾವುದೇ ಹೋಬಳಿಯಲ್ಲೂ ಸ್ಥಳೀಯ ನಾಟಿ ಹಸುಗಳೇ ಇಲ್ಲದಾಗಿವೆ. ಈ ಹಿಂದೆ ಸ್ಥಳೀಯ ನಾಟಿ ತಳಿಗಳಿಂದ ಮಿಶ್ರತಳಿ ಕರುಗಳನ್ನು ಪಡೆಯಲಾಗುತಿತ್ತು. ಇದರಿಂದ ಹಾಲಿನ ಗುಣಮಟ್ಟ ಚನ್ನಾಗಿ ಬರುತಿತ್ತು. ಈಗ ಶುದ್ಧ ಮಿಶ್ರತಳಿಯ ಹಸುಗಳಿಂದಲೇ ಪಡೆದಿರುವ ಕರುಗಳೇ ಇರುವುದರಿಂದ ಇವುಗಳನ್ನು ವೈಜ್ಞಾನಿಕ ವಿಧಾನದ ಮೂಲಕ ಸಾಕಾಣಿಕೆ ಮಾಡದರೆ ಮಾತ್ರ ಗುಣಮಟ್ಟದ ಹಾಲು ಪಡೆಯಲು ಸಾಧ್ಯ ಎನ್ನುತ್ತಾರೆ ಹಾಲು ಉತ್ಪಾದಕ ನಾಗಸಂದ್ರ ಗ್ರಾಮದ ಚಂದ್ರಶೇಖರ್.
ದೊಡ್ಡಬಳ್ಳಾಪುರವು ಸೇರಿದಂತೆ ಇಡೀ ರಾಜ್ಯದಲ್ಲಿ ಇಂದು ಹೈನುಗಾರಿಕೆಯಲ್ಲಿ ಮಿಶ್ರತಳಿ ರಾಸುಗಳ ಸಂಖ್ಯೆಯೇ ಹೆಚ್ಚಾಗಿದೆ. ಎಚ್ ಆಫ್, ಜರ್ಸಿ, ಬ್ಲಾಕ್ ಹಾಲ್ ಮತ್ತಿತರೆ ತಳಿಗಳೆ ಹೆಚ್ಚಾಗಿ ರೈತರ ಬಳಿ ಇದೆ. ಈ ತಳಿಯ ರಾಸುಗಳನ್ನು ವೈಜ್ಞಾನಿಕ ವಿಧಾನದ ಮೂಲಕ ಸಾಕಾಣಿಕೆ ಮಾಡಿದರಷ್ಟೆ ಹೆಚ್ಚಿನ ಗುಣಮಟ್ಟದ ಹಾಲು ನಿರೀಕ್ಷೆ ಮಾಡಲು ಸಾಧ್ಯ. ಆದರೆ ಪಶುವೈದ್ಯರು ಶಿಫಾರಸ್ಸು ಮಾಡುವ ರೀತಿಯಲ್ಲಿ ಮೇವು, ಕನಿಜಯುಕ್ತ ಆಹಾರ, ತೂಕದ ಲೆಕ್ಲದಲ್ಲಿ ಹುಲ್ಲು ನೀಡಿದರೆ ರೈತರು ಹಾಲು ಮಾರಾಟದಿಂದ ಬರುವ ಹಣಕ್ಕಿಂತಲು ಹೆಚ್ಚಿನ ಖರ್ಚು ಹಸು ಸಾಕಣಿಕೆಗೆ ಮಾಡಬೇಕಿದೆ.
ಲಾಭಕ್ಕಿಂತ ಖರ್ಚು ಜಾಸ್ತಿ
ಹೀಗಾಗಿ ವೈದ್ಯರ ಶಿಫಾರಸ್ಸಿನಂತೆ ಹಸು ಸಾಕಾಣಿಕೆ ಮಾಡಲು ಸಾಧ್ಯವೇ ಇಲ್ಲ. ಆದರೆ ಬಮೂಲ್ ನಿಯಮದಂತೆ ಹಾಲಿನ ಫ್ಯಾಟ್ ಪ್ರಮಾಣ 3.5 ಇದ್ದರೆ ಮಾತ್ರ ರೈತರಿಂದ ಹಾಲು ಪಡೆಯಬೇಕು. ಹಾಲಿನ ಗುಣಮಟ್ಟವನ್ನು ಡೇರಿಗಳಲ್ಲಿ ಇರುವ ಕಂಪ್ಯೂಟರ್‌ಗಳಲ್ಲಿ ಆನ್‌ಲೈನ್ ವ್ಯವಸ್ಥೆಯ ಮೂಲಕವೇ ಪರೀಕ್ಷೆ ಮಾಡುವ ನಿಯಮ ಇದೇ ಜನವರಿ ತಿಂಗಳಿಂದ ತಾಲ್ಲೂಕಿನ ಎಲ್ಲಾ 201 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬಂದಿದೆ ಎಂದು ಬಚ್ಚಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯನಿರ್ವಾಹಕ ಆರ್.ಸತೀಶ್ ತಿಳಿಸಿದರು.
ವರ್ಷದಲ್ಲಿ ನಾಲ್ಕು ತಿಂಗಳು ಹಾಲು ಕರೆದರೆ ಉಳಿದ ಅವಧಿಯಲ್ಲಿ ಹಸುವನ್ನು ಸಾಕಾಣಿಕೆ ಮಾಡಲು ರೈತರೆ ತಮ್ಮ ಕೈಯಿಂದ ಹಣ ಖರ್ಚು ಮಾಡುವ ಸ್ಥಿತಿ ಇದೆ. ಮಿಶ್ರತಳಿ ರಾಸುಗಳು ಹೆಣ್ಣು ಕರುಗಳನ್ನು ಹಾಕಿದರೆ ಮಾತ್ರ ರೈತರಿಗೆ ಲಾಭ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ ಗಂಡು ಕರುಗಳನ್ನು ಮಾರಾಟ ಮಾಡುವುದೇ ಕಷ್ಟವಾಗಿದೆ. ಈ ಎಲ್ಲಾ ಸಮಸ್ಯೆಗಳಿಂದಾಗಿ ರೈತರು ಹೈನುಗಾರಿಕೆಯಿಂದ ವಿಮುಕರಾಗುತ್ತಿದ್ದಾರೆ.
ಎಚ್ಚೆತ್ತುಕೊಳ್ಳಬೇಕಿದೆ
ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ, ರಾಸುಗಳ ಆರೋಗ್ಯದ ಕಡೆಗೆ ಆದ್ಯತೆ, ಕೆಎಂಎಫ್‌ನಲ್ಲಿನ ಆಡಳಿತಾತ್ಮಕ ವೆಚ್ಚ ಕಡಿತದಂತಹ ಸಮಸ್ಯೆಗಳ ಪರಿಹಾರದ ಕಡೆಗೆ ಗಮನ ನೀಡಬೇಕು. ಸ್ಥಳೀಯ ತಳಿಗಳ ಅಭಿವೃದ್ಧಿ ಹಾಗೂ ಸ್ಥಳೀಯ ತಳಿಗಳಿಂದ ಉತ್ಪಾದನೆಯಾಗುವ ಹಾಲಿಗೆ ಪ್ರತ್ಯೇಕ ಬೆಲೆ ನಿಗದಿ ಮಾಡಬೇಕು ಎಂದು ಬಚ್ಚಹಳ್ಳಿ ಎಂಪಿಸಿಎಸ್ ಕಾರ್ಯನಿರ್ವಾಹಕ ಆರ್.ಸತೀಶ್ ತಿಳಿಸಿದರು.