ಡಿ.12ಕ್ಕೆ ಬೆಳಗಾವಿಯಲ್ಲಿ ರೈತ ಅಧಿವೇಶನ: ಬಡಗಲಪುರ ನಾಗೇಂದ್ರ

ಮೈಸೂರು: 'ರಾಜ್ಯ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವುದು ಹಾಗೂ ಅತಿವೃಷ್ಟಿ ಪರಿಹಾರ ವಿತರಣೆಗೆ ಆಗ್ರಹಿಸಿ ಡಿ.12ರ ಭಾನುವಾರ ಬೆಳಿಗ್ಗೆ 11ಕ್ಕೆ ಬೆಳಗಾವಿಯ ಮಾರುತಿ ಮಂದಿರದಲ್ಲಿ ರೈತ ಅಧಿವೇಶನ ಆಯೋಜಿಸಲಾಗಿದ್ದು, ವಿವಿಧ ಸಂಘಟನೆಗಳ 800ಕ್ಕೂ ಹೆಚ್ಚು ಮುಖಂಡರು ಭಾಗವಹಿಸಲಿದ್ದಾರೆ' ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
'ದೆಹಲಿ ಗಡಿಗಳು ಹಾಗೂ ದೇಶದಾದ್ಯಂತ ನಡೆದ ರೈತ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರವು ಜನವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದೆ. ಆದರೆ, ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಭೂ ಸುಧಾರಣಾ, ಎಂಪಿಎಂಸಿ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ರೈತರ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು' ಎಂದು ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಚಳಿಗಾಲದ ವಿಧಾನಸಭಾ ಅಧಿವೇಶನದ ಮುನ್ನಾ ದಿನ ನಡೆಯುವ ರೈತರ ಅಧಿವೇಶನವನ್ನು ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ನಾಯಕ ಡಾ.ಅಶೋಕ ಧವಳೆ ಉದ್ಘಾಟಿಸುವರು. ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸುವರು. ರೈತ ಸಂಘ, ಜನಾಂದೋಲನಗಳ ಮಹಾ ಮೈತ್ರಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸುವರು' ಎಂದರು.
'ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಜನವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ಬಿಡೆವು' ಎಂದು ಎಚ್ಚರಿಸಿದರು.
'ನಿರಂತರ ಮಳೆಯಿಂದ ರಾಜ್ಯದಲ್ಲಿ ಬೆಳೆ ಹಾನಿ ಸಂಭವಿಸಿದೆ. ರೈತರಿಗೆ ₹ 2,500 ಕೋಟಿ ನಷ್ಟವಾಗಿದೆ. ಆದರೆ, ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವುದು ₹ 182 ಕೋಟಿ ಮಾತ್ರ. ಸಮೀಕ್ಷೆಯನ್ನೂ ವೈಜ್ಞಾನಿಕವಾಗಿ ನಡೆಸಿಲ್ಲ. ಪರಿಹಾರ ನಿಗದಿಯು ರೈತರಿಗೆ ಏನೇನೂ ಸಾಲದು' ಎಂದು ಹೇಳಿದರು.
'ಗೋವಾ- ಕೇರಳದಿಂದ ದನದ ಮಾಂಸವು ರಾಜ್ಯದ ಮಾಲ್‌ಗಳಿಗೆ ಪೂರೈಕೆಯಾಗುತ್ತದೆ. ಅನುಪಯುಕ್ತ ಜಾನುವಾರು ಮಾರಾಟಕ್ಕೆ ರೈತರಿಗೆ ಅವಕಾಶ ನೀಡಬೇಕು. ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಬೇಕು' ಎಂದರು.
'ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಭೂಮಿ ಮಾರಾಟ ಶೇ 75 ರಷ್ಟು ಹೆಚ್ಚಳವಾಗಿದೆ. ಉದ್ಯಮಿಗಳಿಗೆ ಒಂದೇ ದಿನದಲ್ಲಿ ಖಾತೆ ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವರು ಹೇಳುತ್ತಾರೆ. ಸಣ್ಣ ರೈತರು ಹಿಡುವಳಿ ಭೂಮಿಯನ್ನು ಮಾರಾಟ ಮಾಡುವಂತೆ ಮಾಡಿ, ದಿವಾಳಿಗಳನ್ನಾಗಿ ಮಾಡುತ್ತಿದೆ. ನಗರ ಹಾಗೂ ಪಟ್ಟಣದ ರೈತರ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ' ಎಂದು ಕಿಡಿಕಾರಿದರು.
ಕೆ.ಎಸ್.ಪುಟ್ಟಣ್ಣಯ್ಯ ನೆನಪು; ಕಾರ್ಯಾಗಾರ: 'ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಜನ್ಮದಿನದ ಪ್ರಯುಕ್ತ ಡಿ.23 ಹಾಗೂ 24ರಂದು ಹಳೇ ಮೈಸೂರು ಭಾಗದ ಎಂಟು ಜಿಲ್ಲೆಗಳ ಯುವ ರೈತ ಮುಖಂಡರಿಗೆ ಸಂಘಟನಾ ತರಬೇತಿ ಕಾರ್ಯಾಗಾರವನ್ನು ನಡೆಸಲಿದ್ದು, ಪ್ರತಿ ಜಿಲ್ಲೆಯಿಂದ 25 ಮಂದಿ ಭಾಗವಹಿಸಲಿದ್ದಾರೆ' ಎಂದು ಬಡಗಲಪುರ ನಾಗೇಂದ್ರ ಹೇಳಿದರು.
'ಮಂಡ್ಯ, ಮೈಸೂರು ಅಥವಾ ಕೊಡಗಿನಲ್ಲಿ ತರಬೇತಿ ನಡೆಯಲಿದ್ದು, ಶೀಘ್ರ ಸ್ಥಳ ನಿಗದಿ ಮಾಡಲಾಗುವುದು. ರೈತ ಹೋರಾಟ ಮುನ್ನಡೆಸುವ ಕುರಿತು ಜಾಗೃತಿ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. 50 ಸಾವಿರ ಮಂದಿ ಸಮಾವೇಶದಲ್ಲಿ ಭಾಗವಹಿಸಬೇಕಿತ್ತು. ಕೋವಿಡ್ ಮಾರ್ಗಸೂಚಿಯಂತೆ ಈ ಬಾರಿ ಸರಳವಾಗಿ ಆಯೋಜಿಸಲಾಗುತ್ತಿದೆ. ಪುಟ್ಟಣ್ಣಯ್ಯ ಸ್ಮರಣಾದಿನವಾದ ಫೆ.18ಕ್ಕೆ ರಾಜ್ಯಮಟ್ಟದ ಸಮಾವೇಶ ನಡೆಸಲು ಚಿಂತಿಸಲಾಗಿದೆ' ಎಂದು ಮಾಹಿತಿ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಹೊಸಕೋಟೆ ಬಸವರಾಜ್, ಮುಖಂಡ ಪ್ರಸನ್ನ ಎನ್.ಗೌಡ, ಪದಾಧಿಕಾರಿಗಳಾದ ವಿಜಯೇಂದ್ರ, ಪ್ರಭಾಕರ, ಮಂಡಕಳ್ಳಿ ಮಹೇಶ್ ಇದ್ದರು.