ರೇಬಿಸ್ ಕಾಯಿಲೆ ತಡೆಗೆ ಜಾಗೃತಿ ಅವಶ್ಯ

ತುರುವೇಕೆರೆ: ರೇಬಿಸ್ ಮಾರಣಾಂತಿಕ ಕಾಯಿಲೆಯಾಗಿದ್ದು ಜನರು ಸಾಕುಪ್ರಾಣಿಗಳ ಬಗ್ಗೆ ಪ್ರೀತಿ ತೋರುವುದರ ಜೊತೆಗೆ ಮುನ್ನೆಚ್ಚರಿಕೆವಹಿಸಬೇಕಿದೆ ಎಂದು ಪಶುವೈದ್ಯ ಡಾ.ಶ್ರೀನಿವಾಸ್ ಪೂಜಾರ್ ಹೇಳಿದರು.
ಪಟ್ಟಣದ ಸರ್ಕಾರಿ ಪಶುವೈದ್ಯ ಇಲಾಖೆಯ ಆವರಣದಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಪಶುವೈದ್ಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ರೇಬಿಸ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆಯಲ್ಲಿ ಮುದ್ದಾಗಿ ಸಾಕುವ ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳಿಗೆ ಸಕಾಲದಲ್ಲಿ ರೇಬಿಸ್ ಚುಚ್ಚುಮದ್ದು ಹಾಕಿಸಬೇಕು. ರೇಬಿಸ್ ರೋಗವು ಪ್ರಾಣಿಗಳಿಂದ ಮನುಷ್ಯರಿಗೆ ಹರಡಿ ಮನುಷ್ಯನ ನರಮಂಡಲವನ್ನು ಹಾನಿಗೊಳಿಸಿ ಸಾವು ಸಂಭವಿಸುವಂತೆ ಮಾಡುತ್ತದೆ. ಹಾಗಾಗಿ, ಜನರು ಇದರ ಬಗ್ಗೆ ಎಚ್ಚರವಹಿಸುವುದು ಅತ್ಯಗತ್ಯ ಎಂದರು.
ಲಯನ್ಸ್ ಅಧ್ಯಕ್ಷ ಮಿಹಿರಕುಮಾರ್ ಮಾತನಾಡಿ, ಸಾಕು ಪ್ರಾಣಿಗಳನ್ನು ಹೊಂದಿರುವವರು ಅವುಗಳ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಪಶುವೈದ್ಯ ಇಲಾಖೆಯ ಉಪ ನಿರ್ದೇಶಕ ಸದಾಶಿವಯ್ಯ, ಲಯನ್ಸ್ ಪದಾಧಿಕಾರಿಗಳಾದ ರಾಜಣ್ಣ, ಮಹೇಶ್, ರವಿ, ನಾಗರಾಜು ಹಾಜರಿದ್ದರು