ಸಿದ್ದರಾಮಯ್ಯ ತಂತ್ರಕ್ಕೆ ಕಾಂಗ್ರೆಸ್ ನಾಯಕರೇ ಕಂಗಾಲು! (ಸುದ್ದಿ ವಿಶ್ಲೇಷಣೆ)
ಈ ಗೊಂದಲಗಳು ಮುಂದುವರಿದಿರುವಂತೆ ಅವರು ಈಗ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನೆಪದಲ್ಲಿ ಅಲ್ಲಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಸಭೆಗಳನ್ನು ನಡೆಸಿರುವುದು ಮತ್ತೆ ಬಾದಾಮಿಯಿಂದಲೇ ಕಣಕ್ಕಿಳಿಯುತ್ತಾರೆ ಎಂಬ ವದಂತಿಗಳು ಹಬ್ಬಿವೆ. ಈಗಿನ ವಾತಾವರಣ ನೋಡಿದರೆ ಬಹುತೇಕ ಅವರು ಮತ್ತೆ ಬಾದಾಮಿ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಿದರೂ ಆಶ್ಚರ್ಯ ಏನಿಲ್ಲ. ಕೋಲಾರದಿಂದ ಸ್ಪರ್ಧೆಗಿಳಿಯಲು ಎಲ್ಲ ತಯಾರಿ ಮಾಡಿಕೊಂಡಿದ್ದ ಸಿದ್ದರಾಮಯ್ಯನವರಿಗೆ ಸಮಸ್ಯೆಯಾಗಿದ್ದು ಸ್ಥಳೀಯ ಕಾಂಗ್ರೆಸ್ ನಾಯಕರ ನಡುವಿನ ಬಗೆಹರಿಯದ ಗುಂಪುಗಾರಿಕೆ. ಇದೇ ದೊಡ್ಡ ಸಮಸ್ಯೆಯಾಗಿ ಕಾಡಿದ್ದು ನಿಜ.
ಮೊದ ಮೊದಲು ಅಹಿಂದ ಮತಗಳ ಮೇಲೆ ಕಣ್ಣಿಟ್ಟಿದ್ದ ಅವರು ಇದೇ ಕ್ಷೇತ್ರ ಸುರಕ್ಷಿತವೆಂದು ಭಾವಿಸಿದ್ದರಾದರೂ ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ, ಹಾಗೆಯೇ ತನ್ನನ್ನು ಸೋಲಿಸಲು ಜೆಡಿಎಸ್, ಬಿಜೆಪಿ ಗುಟ್ಟಾಗಿ ಒಂದಾಗಿ ತಂತ್ರಗಳನ್ನು ಹೆಣೆಯುತ್ತಿವೆ ಎಂಬ ಮಾಹಿತಿ ದೊರೆತಾಗ ಕೊಂಚ ಹಿಂಜರಿಕೆ ವ್ಯಕ್ತಪಡಿಸಿದ್ದು ನಿಜ.
ಆದರೆ ಕೋಲಾರದಿಂದ ಸ್ಪರ್ಧೆಗೆ ಮೊದ ಮೊದಲು ತೀವ್ರ ಆಸಕ್ತಿ ತೋರಿಸಿದ್ದ ಸಿದ್ದರಾಮಯ್ಯ ಕಡೇ ಗಳಿಗೆಯಲ್ಲಿ ನಿರ್ಧಾರದಿಂದ ಹಿಂದೆ ಸರಿದದ್ದು ಬೆಂಬಲಿಗರಿಗೂ ಆಘಾತ ತಂದೊಡ್ಡಿದೆ. ಹಾಗೆ ನೋಡಿದರೆ ಮೊದಲಿನಿಂದಲೂ ಹೈಕಮಾಂಡ್ ಹೇಳಿದ ಕಡೆ ತಾನು ಸ್ಪರ್ಧಿಸುವುದಾಗಿ ಅವರು ಹೇಳುತ್ತಲೇ ಬಂದಿದ್ದಾರೆ. ಇಲ್ಲಿ ನಿಜವಾಗಿ ಗುರುತಿಸಬೇಕಾದ ಅಂಶ ಎಂದರೆ ಸಿದ್ದರಾಮಯ್ಯರಂಥಹ ಪ್ರಬಲ ಮತ್ತು ಪ್ರಭಾವೀ ನಾಯಕನಿಗೆ ಇಂಥದೇ ಕ್ಷೇತ್ರದಿಂದ ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಆದೇಶ ಜಾರಿ ಮಾಡುವಷ್ಟು ಕಾಂಗ್ರೆಸ್ ಹೈಕಮಾಂಡ್ ಬಲಯುತವಾಗಿಲ್ಲ. ಅಂತಹ ಧೈರ್ಯ ಪ್ರದರ್ಶಿಸುವ ಮನೋಸ್ಥಿತಿಯಲ್ಲೂ ಕಾಂಗ್ರೆಸ್ ನ ದಿಲ್ಲಿ ನಾಯಕರು ಇಲ್ಲ.
"ಕ್ಷೇತ್ರದ ಆಯ್ಕೆ ನಿಮಗೇ ಬಿಟ್ಟಿದ್ದು" ಎಂದು ಹೇಳುವ ಮೂಲಕ ಆಯ್ಕೆ ಸ್ವಾತಂತ್ರ್ಯವನ್ನು ಅವರಿಗೇ ಬಿಡಲಾಗಿದೆ. ಹಾಗಿದ್ದೂ ಸಿದ್ದರಾಮಯ್ಯ ಯಾಕೆ ಗೊಂದಲಕ್ಕಿಡಾಗಿದ್ದಾರೆ ಎಂಬ ಅಂಶಗಳಿಗೆ ಉತ್ತರ ಹುಡುಕಿದರೆ ಇದೂ ಅವರ ರಾಜಕೀಯ ತಂತ್ರದ ಒಂದು ಭಾಗ ಎಂಬ ಮಾಹಿತಿ ಕಾಂಗ್ರೆಸ್ ಪಕ್ಷದ ಮುಖಂಡರಿಂದಲೇ ದೊರೆಯುತ್ತದೆ. ಇದಕ್ಕೆ ಪೂರಕ ಎಂಬಂತೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕೆಲವು ಆಪ್ತರು ಅವರಿಗೆ ಸಲಹೆ ನೀಡಿದ್ದಾರೆ, ಆ ಸಲಹೆಯನ್ನೂ ಅವರು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಗಳಿವೆ ಎಂಬ ವದಂತಿಗಳೂ ಈಗ ಹಬ್ಬಿವೆರಾಜಕಾರಣದ ವಾಸ್ತವಗಳನ್ನು ನೋಡಿದಾಗ ಸಿದ್ದರಾಮಯ್ಯ ರಾಜ್ಯದಲ್ಲಿ ಅಹಿಂದ ವರ್ಗಗಳ ಪ್ರಶ್ನಾತೀತ ನಾಯಕ ಎಂಬುದರಲ್ಲಿ ಎರಡು ಮಾತೇ ಇಲ್ಲ.
ರಾಜ್ಯದ ಇನ್ನೊಂದು ಪ್ರಬಲ ಕುರುಬ ಜನಾಂಗಕ್ಕೆ ಅವರೇ ಸರ್ವ ಶ್ರೇಷ್ಠ ನಾಯಕ. ಇಂದಿಗೂ ಆ ಸಮುದಾಯ ಅವರನ್ನು ಆರಾಧನಾ ಮನೋಭಾವದಿಂದಲೇ ನೋಡುತ್ತಿದೆ. ಅಂತಹ ಅಭಿಮಾನ, ರಾಜಕೀಯ ಶಕ್ತಿಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಅವರನ್ನು ಬಿಟ್ಟರೆ ಬಿಜೆಪಿ , ಜೆಡಿಎಸ್ ಪಕ್ಷಗಳಲ್ಲಿ ಹಿಂದುಳಿದವರ ಪರ ಧ್ವನಿ ಎತ್ತುವ ನಾಯಕರೇ ಇಲ್ಲ.
ಬಿಜೆಪಿಯಲ್ಲಿ ಅಲ್ಪ ಸ್ವಲ್ಪಶಕ್ತಿ ಹೊಂದಿರುವ ಈಶ್ವರಪ್ಪ,ಶ್ರೀರಾಮುಲು ,ಗೋವಿಂದ ಕಾರಜೋಳರಂತಹ ಮುಖಂಡರುಗಳು ಸ್ವಂತ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡಬೇಕಾದ ಸ್ಥಿತಿಗೆ ಮುಟ್ಟಿದ್ದಾರೆ. ಹೀಗಾಗಿ ಇಡೀ ಹಿಂದುಳಿದ ಸಮುದಾಯದ ನಾಯಕರಾಗಿ ಹೊರ ಹೊಮ್ಮುವ ಸ್ಥಿತಿಯಲ್ಲಿ ಅವರು ಯಾರೂ ಇಲ್ಲ. ಇನ್ನು ಜೆಡಿಎಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯದ್ದೇ ಪಾರುಪತ್ಯ. ಆ ಪಕ್ಷ ಬೆಳೆದು ಬಂದಿರುವ ಹಾದಿಯನ್ನು ನೋಡಿದರೆ ಅಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತ ಮುಖಂಡರು ಗೌಡ ಕುಟುಂಬ ರಾಜಕಾರಣಕ್ಕೆ ಪಗಡೆ ದಾಳಗಳಾಗಿರುವುದು ಬಿಟ್ಟರೆ ಆ ಪಕ್ಷದಲ್ಲಿ ಸ್ವಂತ ಅಸ್ತಿತ್ವ ಕಾಪಾಡಿಕೊಳ್ಳುವುದೇ ಒಂದು ಸವಾಲಿನ ಕೆಲಸ.
ಇಂತಹ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಅಹಿಂದ ಸಮುದಾಯಗಳ ಪಾಲಿಗೆ ಆಶಾಕಿರಣದಂತೆ ಕಂಗೊಳಿಸುತ್ತಿದ್ದಾರೆ. ಅಧಿಕಾರದ ಅವಕಾಶಗಳು ಸಿಕ್ಕ ಸಂದರ್ಭಗಳಲ್ಲೆಲ್ಲ ಆ ಸಮುದಾಯಗಳಿಗೆ ಆಸರೆ ನೀಡುವ ಕೆಲಸ ಮಾಡಿದ್ದಾರೆ. ಅವರು ಪ್ರಬಲ ನಾಯಕರಾಗಿ ಬೆಳೆದಿದ್ದು ಅವರನ್ನು ನಿರ್ಲಕ್ಷ್ಯಿಸುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ದವೂ ಇಲ್ಲ. ಸಿದ್ದರಾಮಯ್ಯ ಅವರಿಗೂ ಈ ಪರಿಸ್ಥಿತಿ ಗೊತ್ತಿಲ್ಲವೆಂದೇನಲ್ಲ.
ಹಾಗಿದ್ದೂ ಕ್ಷೇತ್ರ ಆಯ್ಕೆ ವಿಚಾರದಲ್ಲಿ, ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಯಾಕೆ ಗೊಂದಲಕ್ಕಿಡಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ನಿಜವಾಗಿಯೂ ಅವರು ಯಾವುದೇ ಗೊಂದಲಕ್ಕೊಳಗಾಗಿಲ್ಲ. ಗೊಂದಲಕ್ಕೊಳಗಾದಂತೆ ಸುದ್ದಿಗಳು ಹಬ್ಬುತ್ತಿವೆ. ಇಂತಹ ಸುದ್ದಿಗಳಿಂದ ನಿಜವಾದ ರಾಜಕೀಯ ಲಾಭ ಅವರಿಗೇ ಹೊರತೂ ಬೇರೆ ಯಾರಿಗೂ ಅಲ್ಲ ಎಂಬ ಅಂಶವನ್ನು ಅವರನ್ನು ಹಲವು ದಶಕಗಳಿಂದ ಬಲ್ಲವರು ಮುಂದಿಡುತ್ತಾರೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಪ್ರಬಲ ಶಕ್ತಿ ಕೇಂದ್ರವಾಗಿ ಬೆಳೆದಿದ್ದಾರೆ.
ಹೋದಲ್ಲಿ ಬಂದಲ್ಲಿ ತಮ್ಮದೇ ಸಮುದಾಯದ ಸಭೆಗಳಲ್ಲಿ ಮುಖ್ಯಮಂತ್ರಿ ಹುದ್ದೆಗೇರಲು ಸಮುದಾಯ ತನಗೆ ಬೆಂಬಲ ನೀಡಬೇಕೆಂದೂ ಅಹವಾಲು ಮಂಡಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಕೆಲವೊಂದು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಅವರು ಹಿಂದಿನ ಅಧ್ಯಕ್ಷರುಗಳಂತೆ ಸಿದ್ದರಾಮಯ್ಯ ಹೇಳಿದ್ದಕ್ಕೆಲ್ಲ ಒಪ್ಪಿಕೊಂಡು ತಲೆ ಆಡಿಸುತ್ತಿಲ್ಲ. ಕಾಂಗ್ರೆಸ್ ನಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪುಗೊಂಡಿದ್ದಾರೆ. ಇದು ಒಂದು ರೀತಿಯಲ್ಲಿ ಪಕ್ಷದಲ್ಲಿರುವ ಅವರ ವಿರೋಧಿಗಳಿಗೆ ಆತಂಕ ತಂದೊಡ್ಡಿದೆ.
ಈ ಗುಂಪಿಗೆ ಸಿದ್ದರಾಮಯ್ಯ ಆಸರೆಯಾಗಿದ್ದಾರೆ. ರಾಜ್ಯವ್ಯಾಪಿ ಅವರು ಪ್ರಭಾವ ಹೊಂದಿರುವುದು ಸುಳ್ಳಲ್ಲ. ಆದರೆ ಈಗಿನ ಸನ್ನಿವೇಶದಲ್ಲಿ ರಾಜಕಾರಣದ ಚೆದುರಂಗದಲ್ಲಿ ಅವರು ನಿರೀಕ್ಷಿಸಿದಂತೆ ಪಗಡೆ ದಾಳಗಳು ಉರುಳುತ್ತಿಲ್ಲ. ಅದೇ ಈಗ ಪ್ರಮುಖ ಸಮಸ್ಯೆ.
ಈಗ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಪ್ರಬಲ ಅಸ್ತಿತ್ವವನ್ನು ಋಜುವಾತು ಮಾಡಲು ಉದ್ದೇಶಿಸಿರುವ ಅವರು ಕ್ಷೇತ್ರ ಬದಲಾವಣೆ, ಚುನಾವಣಾ ಸ್ಪರ್ಧೆಯಿಂದ ಹಿಂತೆಗೆತದಂತಹ ಸಂದೇಶಗಳನ್ನು ರವಾನೆ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ತಲ್ಲಣಗೊಳ್ಳುವಂತೆ ಮಾಡಿದ್ದಾರೆ. ಇಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂಬ ಸಂದೇಶ ರವಾನೆ ಆಗುತ್ತಿದ್ದಂತೆ ಅದು ನಿಶ್ಚಿತವಾಗಿ ಚುನಾವಣೆಯ ಮೇಲೆ ಪ್ರಭಾವ ಬೀರುತ್ತದೆ, ಅಷ್ಟೇ ಅಲ್ಲ. ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಪಕ್ಷದ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗುತ್ತದೆ.
ಕ್ಷೇತ್ರ ಆಯ್ಕೆಯ ವಿಚಾರದಲ್ಲೇ ಗೊಂದಲಕ್ಕೆ ಒಳಗಾಗಿರುವ ಸಂದೇಶ ರವಾನೆ ಆದರೆ ಸಹಜವಾಗೇ ತಮ್ಮ ಬೆಂಬಲಕ್ಕೆ ಕಾದಿರುವ ಪಕ್ಷದ ಮುಖಂಡರು, ಅಭ್ಯರ್ಥಿಗಳಾಗ ಬಯಸಿರುವವರ ಗುಂಪು ದುಂಬಾಲು ಬಿದ್ದು ತಮ್ಮ ಕ್ಷೇತ್ರಗಳನ್ನೇ ಬಿಟ್ಟುಕೊಡಲು ಮುಂದೆ ಬರುತ್ತದೆ. ಇಂತಹ ಒತ್ತಡಗಳು, ಬೇಡಿಕೆಗಳು, ಪ್ರತಿಭಟನೆಗಳು ಜೋರಾದಾಗ ಸಹಜವಾಗೇ ಪಕ್ಷದ ವರಿಷ್ಠರ ಗಮನ ಅತ್ತ ಹರಿಯುತ್ತದೆ. ಆಗ ತಾನು ಅನಿವಾರ್ಯ ಆಗಲೇ ಬೇಕಾಗುತ್ತದೆ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ. ಸದ್ಯಕ್ಕೆ ಈ ತಂತ್ರ ಯಶಸ್ವಿಯಾಗಿದೆ.
ಸುಮಾರು ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿರುವ , ರಾಮಕೃಷ್ಣ ಹೆಗಡೆ, ದೇವೇಗೌಡರು, ಜೆ.ಎಚ್. ಪಟೇಲ್ , ಧರ್ಮ ಸಿಂಗ್ ರಂತಹ ರಾಜಕೀಯ ದಿಗ್ಗಜರ ಜತೆ ಕೆಲಸ ಮಾಡಿ ಅಪಾರ ಅನುಭವ ಹೊಂದಿರುವ, ರಾಜ್ಯದ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ಯಾವುದೇ ತೊಡಕಿಲ್ಲದೇ ಆಡಳಿತ ನಡೆಸಿದ ಸಿದ್ದರಾಮಯ್ಯ ವಿಧಾನಸಭಾ ಚುನಾವಣೆಗೆ ಕ್ಷೇತ್ರ ಆಯ್ಕೆ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಿದ್ದಾರೆ, ಪ್ರತಿಪಕ್ಷಗಳ ತಂತ್ರಕ್ಕೆ, ಪಕ್ಷದೊಳಗಿನ ಹಿತ ಶತ್ರುಗಳ ಸಂಭವನೀಯ ಪಿತೂರಿಗೆ ಹೆದರಿದ್ದಾರೆ ಎಂದರೆ ಅದು ಅರ್ಥವಿಲ್ಲದ ವಿಶ್ಲೇಷಣೆ. ಇಂತಹ ಸನ್ನಿವೇಶವನ್ನು ತಾವೇ ಸೃಷ್ಟಿಸಿ ಅದಕ್ಕೆ ಪರಿಹಾರವನ್ನೂ ತಾವೇ ನೀಡುವ ಕಲೆ ಅವರಿಗೆ ಕರಗತವಾಗಿದೆ ಎಂಬುದು ಜನತಾ ಪರಿವಾರದ ಕಾಲದಿಂದಲೂ ಅವರನ್ನು ಹತ್ತಿರದಿಂದ ಬಲ್ಲ ಪ್ರಮುಖ ನಾಯಕರೊಬ್ಬರು ಹೇಳುವ ಮಾತು. ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಬಿಜೆಪಿಯ ಹಿರಿಯ ನಾಯಕ , ಮಾಜಿ ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ ಇದೆಲ್ಲ ಸಿದ್ದರಾಮಯ್ಯನವರ ರಾಜಕೀಯ ತಂತ್ರ, ಅವರು ವರುಣಾದಿಂದ ಸ್ಪರ್ಧಿಸುತ್ತಾರೆ ಎಂದೂ ಪ್ರತಿಕ್ರಿಯಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರಗೇ ಬಿಟ್ಟು ಮತ್ತೆ ಬಾದಾಮಿ ಕ್ಷೇತ್ರವನ್ನೇ ಸಿದ್ದರಾಮಯ್ಯ ಆಯ್ಕೆ ಮಾಡಿಕೊಂಡರೆ ಅದೇನೂ ಆಶ್ಚರ್ಯವಲ್ಲ. ಪಕ್ಷ ಒಂದು ವೇಳೆ ಅಧಿಕಾರಕ್ಕೆ ಬಂದರೆ ಮತ್ತೆ ತನ್ನನ್ನೇ ಮುಖ್ಯಮಂತ್ರಿ ಎಂದು ಘೋಷಿಸಬೇಕು ಎಂಬ ಷರತ್ತನ್ನೂ ಅವರು ಹೈಕಮಾಂಡ್ ಮುಂದೆ ಇಟ್ಟಿದ್ದು ಅದಕ್ಕೆ ತಾತ್ವಿಕ ಒಪ್ಪಿಗೆಯೂ ಸಿಕ್ಕಿದೆ ಎನ್ನಲಾಗುತ್ತಿದೆ)ಕಾಂಗ್ರೆಸ್ ನಲ್ಲಿ ಈ ಬೆಳವಣಿಗೆ ನಡೆದಿರುವಂತೆಯೇ ಬಿಜೆಪಿಯಲ್ಲಿ ಮುಂದಿನ ಅವಧಿಗೂ ತಾನೇ ಮುಖ್ಯಮಂತ್ರಿ ಎಂದು ಬಸವರಾಜ ಬೊಮ್ಮಾಯಿ ಹೇಳಿಕೊಂಡಿದ್ದಾರೆ.
ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೇ ಸುಮ್ಮನೇ ಎಂಬಂತೆ ಪ್ರತಿಕ್ರಿಯೆ ನೀಡಿ “ಹೌದು ಅದರಲ್ಲಿ ತಪ್ಪೇನಿದೆ’’ ಎಂದು ಪ್ರಶ್ನಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರ ಹೇಳಿಕೆ ಬರುವ ಒಂದು ದಿನ ಮೊದಲು ಮುಂದಿನ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷದ ಸಭೆ ಆಯ್ಕೆ ಮಾಡುತ್ತದೆ ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪ ನಂತರ ಇದ್ದಕ್ಕಿದ್ದಂತೆ ಮಖ್ಯಮಂತ್ರಿ ಹೇಳಿಕೆಗೆ ಸಹಮತ ವ್ಯಕ್ತಪಡಿಸಿರುವುದರ ಹಿಂದೆಯೂ ಜಾಣತನ ಅಡಗಿದೆ. ಈಗಾಗಲೇ ಬಿಜೆಪಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ಸಚಿವರಾದ ಆರ್.
ಅಶೋಕ್, ಮುರುಗೇಶ ನಿರಾಣಿ, ಯತ್ನಾಳ್ ಸೇರಿದಂತೆ ಹಲವು ಪ್ರಮುಖ ಮುಖಂಡರ ದಂಡೇ ಮುಂದಿನ ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟು ಕಾಯುತ್ತಿದೆ. ಇದು ಗುಟ್ಟೇನಲ್ಲ. ಇದನ್ನು ಅರಿತೇ ಯಡಿಯೂರಪ್ಪ ತಮ್ಮ ದಾಳ ಉರುಳಿಸಿದ್ದಾರೆ. ಅದೇ ವಿಶೇಷ. ಕಂಗಾಲಾಗುವ ಸರದಿ ಉಳಿದವರದ್ದು. ಯಗಟಿ ಮೋಹನ್