ಬಿಟ್ ಕಾಯಿನ್; ಆರೋಪ ಬಿಟ್ಟು ಕಾಂಗ್ರೆಸ್ ನಾಯಕರು ದಾಖಲೆ ಬಿಡುಗಡೆ ಮಾಡಲಿ: ಶೆಟ್ಟರ್ ಸವಾಲು
ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆ ಕೇವಲ ರಾಜಕಾರಣಕ್ಕಾಗಿ ಮಾತ್ರ ಸೀಮಿತವಾಗಿದೆ. ಸುಳ್ಳು ಆರೋಪ ಮಾಡುವ ಬದಲು ಏನಾದರೂ ದಾಖಲೆಯಿದ್ದರೆ ಬಿಡುಗಡೆ ಮಾಡಲಿ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ ಸವಾಲು ಹಾಕಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರುಗಳು ಕೂಡ ಇವೆ. ಈ ಕುರಿತು ಕೆಲ ಪತ್ರಿಕೆಗಳಲ್ಲಿ ಹೆಸರು ಸಮೇತ ವರದಿಗಳು ಬಂದಿವೆ. ಆದರೆ ವಿನಾಕಾರಣ ಬಿಜೆಪಿಯ ನಾಯಕರು ಭಾಗಿಯಾಗಿದ್ದಾರೆ ಎನ್ನುವ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಯಾರೋ ಮಾಡುತ್ತಾರೆ ಎನ್ನುವ ಸಲುವಾಗಿ, ಬೇಜಾವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ.ಈ ರೀತಿ ಆರೋಪ ಮಾಡುವುದು ರಾಜಕೀಯ ಪಕ್ಷಕ್ಕೆ ಒಳ್ಳೆಯದಲ್ಲ. ಅವರ ಬಳಿ ಏನಾದರೂ ದಾಖಲೆ, ಸಾಕ್ಷಿಗಳಿದ್ದರೆ ಬಿಡುಗಡೆ ಮಾಡಲಿ ಎಂದರು.ಚಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ನಾಯಕರ ಹೆಸರು ಬಂದಿವೆ. ಈ ಕುರಿತು ಕಾಂಗ್ರೆಸ್ ನಾಯಕರ ಉತ್ತರವೇನು? ಬಿಜೆಪಿ ನಾಯಕರ ಮೇಲೆ ನಿರಾಧಾರವಾಗಿ ಆರೋಪ ಮಾಡುವುದು ತಪ್ಪು. ಅದಕ್ಕೇನಾದರೂ ಸಾಕ್ಷಿ ಪುರಾವೆಗಳಿದ್ದರೆ ಹಾಜರು ಮಾಡಿ ತನಿಖೆ ಆಗಲಿ. ಆಧಾರ ರಹಿತ ಆರೋಪ ಮಾಡುವ ಕಾಂಗ್ರೆಸ್ ಬೇಜಾವಾಬ್ದಾರಿಯ ಪಕ್ಷವಾಗಿದೆ. ಪ್ರತಿಯೊಂದು ವಿಚಾರ, ವಿಷಯಗಳಿಗೆ ಅನುಮಾನ ವ್ಯಕ್ತಪಡಿಸುವುದು ಕಾಂಗ್ರೆಸ್ ನಾಯಕರ ಕೆಲಸವಾಗಿದೆ. ಬೇರೆ ಬೇರೆ ಸರ್ಕಾರ ಇದ್ದಾಗಲೂ ಸಿಬಿಐ ಗೆ ಸಾಕಷ್ಟು ಕೇಸ್ ತನಿಖೆ ಆಗಿವೆ ಎಂದ ಅವರು ಇದು ಆಗಲಿ.ಬಿಟ್ ಕಾಯಿನ್ ಸಲುವಾಗಿ ಸಿಎಂ ದೆಹಲಿಗೆ ಹೋಗಿಲ್ಲ. ರಾಜ್ಯದ ಹಲವು ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲು ತೆರಳಿದ್ದಾರೆ. ಇದನ್ನು ಕಾಂಗ್ರೆಸ್ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು