ಹಿಂದೂಪರ ಸಂಘಟನೆಗಳ ಮೌನ ಪ್ರತಿಭಟನೆ
ಹೊಸಕೋಟೆ ನಗರದ ಜಯಚಾಮರಾಜೇಂದ್ರ ವೃತ್ತದ ಬಳಿ ಇರುವ ಪುರಾತನ ನಾಗರಕಲ್ಲುಗಳು ಹಾಗೂ ಅರಳಿಕಟ್ಟೆಯನ್ನು ನಗರಸಭೆಯು ರಸ್ತೆ ಅಗಲೀಕರಣ ಮಾಡುವ ವೇಳೆ ಅಶ್ವಥಕಟ್ಟೆಯ ಮುಂಭಾಗದ ಕಲ್ಲುಗಳನ್ನು ಏಕಾಏಕಿ ಜೆಸಿಬಿ ಮೂಲಕ ಕಿತ್ತುಹಾಕಿದ್ದನ್ನು ಖಂಡಿಸಿ ಬುಳ್ಳಹಳ್ಳಿ ದ್ರೌಪದಿ ಆದಿಪರಾಶಕ್ತಿ ಸಂಸ್ಥಾನಮಠದ ಮಂಜುನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳು ಮೌನ ಪ್ರತಿಭಟನೆ ಮಾಡಿದವು. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ರೀತಿಯಲ್ಲಿ ಕಲ್ಲುಗಳನ್ನು ಕಿತ್ತುಹಾಕಿರುವುದು ಬಹಳ ಬೇಸರದ ಸಂಗತಿ. ಹೊಸಕೋಟೆ ತಾಲೂಕಿನಲ್ಲಿ ಯಾವುದೆ ದೇವಾಲಯಗಳನ್ನು ತೆರವುಗೊಳಿಸುವ ಮುನ್ನ ಸಂಬಂಧಪಟ್ಟವರ ಗಮನಕ್ಕೆ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಹೊಸಕೋಟೆ ಟೌನ್ ಬಿಜೆಪಿ ಅಧ್ಯಕ್ಷ ಸಿ.ಜಯರಾಜ್ ಹೇಳಿದರು. ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಹಿಂದೂಗಳ ಭಾವನೆಗೆ ಧಕ್ಕೆತರುವಂತಾಗಬಾರದು ಎಂದು ಬುಳ್ಳಹಳ್ಳಿ ಗ್ರಾಮದ ದ್ರೌಪದಿ ಆದಿಪರಾಶಕ್ತಿ ಮಹಾ ಸಂಸ್ಥಾನ ಮಠದ ಮಂಜುನಾಥ ಸ್ವಾಮೀಜಿ ತಿಳಿಸಿದರು. ಮೌನ ಪ್ರತಿಭಟನೆಯಲ್ಲಿ ಹಿಂದೂ ಪರ ಸಂಘಟನೆಯ ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.