ರಣಜಿ ಕ್ರಿಕೆಟ್: ಕೇರಳಕ್ಕೆ ಆಸರೆಯಾದ ಸಚಿನ್ ಶತಕ
ತಿರುವನಂತಪುರ: ಕರ್ನಾಟಕದ ವಾಸುಕಿ ಕೌಶಿಕ್ ಮಂಗಳವಾರ ರಣಜಿ ಕ್ರಿಕೆಟ್ ಪಂದ್ಯದಲ್ಲಿ ನೀಡಿದ ಏಟಿಗೆ ಕೇರಳದ ಸಚಿನ್ ಬೇಬಿ ತಿರುಗೇಟು ನೀಡಿದರು.
ತುಂಬಾದ ಲ್ಲಿರುವ ಸಂತ ಕ್ಸೇವಿಯರ್ ಕಾಲೇಜು ಮೈದಾನದಲ್ಲಿ ಆರಂಭವಾದ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಸಚಿನ್ ಗಳಿಸಿದ ಶತಕ (ಬ್ಯಾಟಿಂಗ್ 116)ದಿಂದಾಗಿ ಆತಿಥೇಯರು ಮೊದಲ ದಿನದಾಟದ ಮುಕ್ತಾಯಕ್ಕೆ 90 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 224 ರನ್ ಗಳಿಸಿದರು.
ಟಾಸ್ ಗೆದ್ದ ಕೇರಳ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವೇಗದ ಬೌಲರ್ ವಿದ್ವತ್ ಕಾವೇರಪ್ಪ ಅವರಿಗೆ ವಿಶ್ರಾಂತಿ ನೀಡಿದ ಕರ್ನಾಟಕ ತಂಡಕ್ಕೆ ಕೌಶಿಕ್ (36ಕ್ಕೆ4) ಉತ್ತಮ ಆರಂಭ ನೀಡಿದರು.
ಇನಿಂಗ್ಸ್ ಆರಂಭದ ಮೂರು ಓವರ್‌ಗಳಲ್ಲಿ ಮೂವರು ಬ್ಯಾಟರ್ ಗಳಿಗೆ ಪೆವಿಲಿಯನ್‌ಗೆ ದಾರಿ ತೋರುವಲ್ಲಿ ಕೌಶಿಕ್ ಮತ್ತು ವೈಶಾಖ ಯಶಸ್ವಿ ಯಾದರು. ಅದರಲ್ಲಿ ಕೌಶಿಕ್ ಇನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಪೊನ್ನನ್ ರಾಹುಲ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಎರಡನೇ ಓವರ್‌ನಲ್ಲಿ ವೈಶಾಖ ಎಸೆತದಲ್ಲಿ ದೇವದತ್ತ ಪಡಿಕ್ಕಲ್ ಪಡೆದ ಕ್ಯಾಚ್‌ಗೆ ರೋಹನ್ ಪ್ರೇಮ್ ಔಟಾದರು. ನಂತರದ ಓವರ್‌ನಲ್ಲಿ ಮತ್ತೆ ಕೌಶಿಕ್ ಮಿಂಚಿದರು. ರೋಹನ್ ಕುನ್ನುಮ್ಮಳ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆಗ ತಂಡದ ಖಾತೆಯಲ್ಲಿ ಕೇವಲ ಆರು ರನ್‌ಗಳು ಮಾತ್ರ ಇದ್ದವು. ಈ ಹಂತದಲ್ಲಿ ಜೊತೆಗೂಡಿದ ಸಚಿನ್ ಮತ್ತು ವತ್ಸಲ ಗೋವಿಂದ್ (46; 116ಎ) ನಾಲ್ಕನೇ ವಿಕೆಟ್ ಜೊತೆ ಯಾಟದಲ್ಲಿ 120 ರನ್ ಸೇರಿಸಿದರು. ಅಪಾರ ತಾಳ್ಮೆಯ ಬ್ಯಾಟಿಂಗ್ ಮಾಡಿ ದರು.
ಭೋಜನ ವಿರಾಮದ ನಂತರ ಈ ಜೊತೆಯಾಟವನ್ನು ಮುರಿಯುವಲ್ಲಿ ಕೌಶಿಕ್ ಯಶಸ್ವಿಯಾದರು. ಅರ್ಧಶತಕದತ್ತ ಸಾಗಿದ್ದ ಗೋವಿಂದ್ ಅವರ ಕ್ಯಾಚ್ ಪಡೆದ ವಿಕೆಟ್‌ಕೀಪರ್ ಬಿ.ಆರ್. ಶರತ್ ಕೇಕೆ ಹಾಕಿದರು. ತಮ್ಮ ಇನ್ನೊಂದು ಓವರ್‌ನಲ್ಲಿ ಕೌಶಿಕ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ಸಲ್ಮಾನ್ ನಿಜಾರ್ ಕ್ಲೀನ್‌ಬೌಲ್ಡ್ ಆದರು.
ಅಕ್ಷಯ್ ಚಂದ್ರನ್ ಕೇವಲ 17 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಇನ್ನೊಂದೆಡೆ ಗಟ್ಟಿಯಾಗಿ ನಿಂತಿದ್ದ ಸಚಿನ್ ಮೊತ್ತ ಹೆಚ್ಚಿಸುವ ಪ್ರಯತ್ನ ಮಾಡಿದರು. ಅವರೊಡಗೂಡಿದ ಆಲ್‌ರೌಂಡರ್ ಜಲಜ್ ಸಕ್ಸೆನಾ (ಬ್ಯಾಟಿಂಗ್ 31) ವಿಕೆಟ್ ಪತನ ತಡೆದರು. ಸಚಿನ್ ಶತಕದ ಗಡಿ ದಾಟಿದರು. ಮುರಿಯದ ಏಳನೇ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿದರು. ಇದರಿಂದಾಗಿ ಕೇರಳ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವ, ಮಯಂಕ್ ಬಳಗದ ಯೋಜನೆ ಕೈಗೂಡಲಿಲ್ಲ.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: 90 ಓವರ್‌ಗಳಲ್ಲಿ ಕೇರಳ 6ಕ್ಕೆ 224: ಸಚಿನ್ ಬೇಬಿ ಬ್ಯಾಟಿಂಗ್ 116, ವತ್ಸಲ ಗೋವಿಂದ್ 46, ಅಕ್ಷಯ್ ಚಂದ್ರನ್ 17, ಜಲಜ್ ಸಕ್ಸೇನಾ ಬ್ಯಾಟಿಂಗ್ 31; ವಿ. ಕೌಶಿಕ್ 36ಕ್ಕೆ 4, ವಿಜಯಕುಮಾರ್ ವೈಶಾಖ 56ಕ್ಕೆ 1, ಶ್ರೇಯಸ್ ಗೋಪಾಲ್ 25ಕ್ಕೆ 1; ಕರ್ನಾಟಕ ವಿರುದ್ಧದ ಪಂದ್ಯ.