ಬಿಜೆಪಿ ಯುವಕರಿಗೆ ಉದ್ಯೋಗ ನೀಡದೆ ಧರ್ಮ ರಕ್ಷಣೆಯ ಬಿರುದು ನೀಡುತ್ತಿದೆ; ಪ್ರಿಯಾಂಕ್ ಖರ್ಗೆ
ಬೆಂಗಳೂರು: ಆರಂಭದಿಂದಲೂ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಬಿಜೆಪಿ ಹೇಳಿಕೊಂಡು ಬಂದಿದೆ. ಆದರೆ ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗ ನೀಡುತ್ತಿಲ್ಲ. ಯುವಕರ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದು, ಧರ್ಮ ರಕ್ಷಣೆ, ಗೋರಕ್ಷಣೆಯ ಬಿರುದು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪರೇಶ್ ಮೆಸ್ತಾ ಸಾವು ಆಕಸ್ಮಿಕ. ಈ ಪ್ರಕರಣದ ಬಗ್ಗೆ ಸಿಬಿಐ ವರದಿ ಸ್ಪಷ್ಟವಾಗಿದೆ. ಮೆಸ್ತಾ ಸಾವು ಯಾವುದೇ ಕೋಮು ಗಲಭೆಯಿಂದ ನಡೆದಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ನಡೆದ ಎರಡೇ ದಿನಕ್ಕೆ ಪರೇಶ್ ಮೆಸ್ತಾ ಸಾವು ಸಂಭವಿಸುತ್ತದೆ. ಈ ವಿಚಾರವಾಗಿ ಗುಡ್ಲ ಬಳಿ ಕೋಮು ಸಂಘರ್ಷ ನಡೆಯುತ್ತದೆ ಎಂದು ಹೇಳಿದರು.
ಬಿಜೆಪಿಯ ಧರ್ಮದ ರಕ್ಷಣೆಗೆ ಯುವಕರು ಬಲಿಯಾಗಬೇಡಿ. ಬಡವರ ಮಕ್ಕಳನ್ನು ಮಾತ್ರ ಅವರು ಬಲಿ ಕೊಡುವುದು. ಬಿಜೆಪಿ ನಾಯಕರ ಮಕ್ಕಳು ಕೇಸರಿ ಶಾಲು ಹಾಕಿಕೊಂಡು ಹೋರಾಟ ಮಾಡುವುದಿಲ್ಲ. ಬಿಜೆಪಿಗರ ಮಾತಿಗೆ ಯುವಕರು ಬಲಿಯಾಗಬೇಡಿ.
ಮೊದಲು ಮೆಸ್ತಾ ಕುಟುಂಬಕ್ಕೆ ಬಿಜೆಪಿ ಕ್ಷಮೆಯಾಚನೆ ಮಾಡಬೇಕು. ಧಮ್ ಬಗ್ಗೆ ಬಿಜೆಪಿಗರು ಮಾತನಾಡುತ್ತಾರೆ. ಬಿಜೆಪಿಗೆ ಈಗ ಧಮ್ ಇದೆಯಾ ಈ ಘಟನೆ ಬಗ್ಗೆ ಮಾತನಾಡಲು. ನಾವು 15 ದಿನ ಕಾಯುತ್ತೇವೆ. ಅಷ್ಟರಲ್ಲಿ ಬಿಜೆಪಿಗರು ಕ್ಷಮೆ ಕೇಳಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.