ಹುಬ್ಬಳ್ಳಿಯಲ್ಲಿ ಸರಳ ವಾಸ್ತು ಗುರೂಜಿ ಚಂದ್ರಶೇಖರ್‌ ಕೊಲೆ

ಹುಬ್ಬಳ್ಳಿಯಲ್ಲಿ ಸರಳ ವಾಸ್ತು ಗುರೂಜಿ ಚಂದ್ರಶೇಖರ್‌ ಕೊಲೆ

ಹುಬ್ಬಳ್ಳಿ : ಸರಳ ವಾಸ್ತು ಸಂಸ್ಥಾಪಕ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. 

ಹೌದು, ವಿದ್ಯಾನಗರದ ಪ್ರಸಿಡೆಂಟ್ ಹೋಟೆಲ್‌ನಲ್ಲಿ ಚಂದ್ರಶೇಖರ ಗುರೂಜಿ ತಂಗಿದ್ದರು . ಇಂದು ಬೆಳಗ್ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ . ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಆಯುಕ್ತ ಲಾಭೂರಾಮ , ಡಿಸಿಪಿ ಸಾಹಿಲ್ ಬಾಗ್ಲಾ ಪರಿಶೀಲನೆ ನಡೆಸಿದ್ದಾರೆ . 

ವಾಸ್ತು ಜೋತಿಷ್ಯದಿಂದ ನೊಂದವರು ಭಕ್ತರ ಸೋಗಿನಲ್ಲಿ ಬಂದ ಕಿಡಿಗೇಡಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ .  

ಸರಳ ವಾಸ್ತುವಿನ ಸಂಶೋಧಕರಾಗಿದ್ದ ಡಾ.ಚಂದ್ರಶೇಖರ ಅಂಗಡಿ ( ಗುರೂಜಿ ) ಅವರು ಚಿಕ್ಕಂದಿನಲ್ಲೇ ಆಧ್ಯಾತ್ಮದತ್ತ ಆಸಕ್ತಿ ಹೊಂದಿದ್ದರು . 8 ವರ್ಷ ವಯಸ್ಸಿನಲ್ಲಿದ್ದಾಗಲೇ ತಮ್ಮೂರಿನ ಹಳೆಯ ದೇವಾಲಯವೊಂದರ ಜೀರ್ಣೋದ್ಧಾರಕ್ಕಾಗಿ ಜನರಿಂದ ದೇಣಿಗೆ ಸಂಗ್ರಹಿಸಿ ಅಭಿವೃದ್ಧಿ ಮಾಡಿದ್ದರು . 14 ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸೇರಬೇಕೆಂಬ ಬಯಕೆ ಅವರದ್ದಾಗಿತ್ತಾದರೂ ಅನಾರೋಗ್ಯ ಕಾರಣಕ್ಕೆ ಅದು ಸಾಕಾರಗೊಳ್ಳಲಿಲ್ಲ . ಸಿವಿಲ್ ಇಂಜಿನಿಯರ್ ಪದವಿ ಪಡೆದ ಬಳಿಕ ಮುಂಬೈನಲ್ಲಿ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಆರಂಭಿಸಿದ್ದರು . 

1995 ರಲ್ಲಿ “ ಶರಣ ಸಂಕುಲ ಟ್ರಸ್ಟ್ ” ಆರಂಭಿಸಿ ಸಾಮಾಜಿಕ ಕಾರ್ಯದಲ್ಲಿ ನಿರತರಾದರು . 1998 ರಲ್ಲಿ ಅವರಿಗೆ ಕನಸಿನಲ್ಲಿ ತಮ್ಮ ಮನೆಯ ಆಕಾರ ಕಾಣಿಸತೊಡಗಿತು ಹಾಗೂ ಕನಸುಗಳನ್ನು ನನಸಾಗಿಸಿಕೊಳ್ಳುವ ಮಾರ್ಗದ ಬಗ್ಗೆ ಆಲೋಚಿಸ ತೊಡಗಿದರು . ಪೂರ್ವಜರ ತಿಳಿವಳಿ ಹಾಗೂ ಸಂಪನ್ಮೂಲ ಕ್ರೂಡೀಕರಿಸಿ ಸುಂದರ ಕಲಾಕೃತಿಗಳನ್ನು , ಶಾಸ್ತ್ರಗಳನ್ನು ಹೇಗೆ ರೂಪಿಸಿದ್ದರು ಮತ್ತು ಇವರು ದೈನಂದಿನ ಬದುಕಿನಲ್ಲಿ ಏಕೆ ಅಗತ್ಯ ಎಂಬುದರ ಬಗ್ಗೆ ತಿಳಿಯುತ್ತಾ ಹೋದರು ನಂತರ ' ಸರಳವಾಸ್ತು ' ಬಗ್ಗೆ ಸಂಶೋಧನೆ ಮಾಡುತ್ತಾ ಹೋದರು . ಯುಟ್ಯೂಬ್ ಜನರಿಗೆ ಸರಳ ವಾಸ್ತುವಿನ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿ ಚಂದ್ರಶೇಖರ ಗುರೂಜಿ ನಿರತವಾಗಿದ್ದರು . ಪ್ರತ್ಯೇಕ ವಾಹಿನಿ ತೆರೆದು ವಾಸ್ತು ಬಗ್ಗೆ ಮಾಹಿತಿ ನೀಡುತ್ತಿದ್ದರು . ಇದೀಗ ಇವರ ಸಾವಿನ ಸುದ್ದಿ ಜನರಿಗೆ ಆಘಾತ ನೀಡಿದೆ .