ಹುಬ್ಬಳ್ಳಿ: ಡಿಸೆಂಬರ್ 13 ರಿಂದ ಆರಂಭಗೊಳ್ಳಲಿರುವ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಹಾಗೂ ನೀರಾವರಿ ಬಗ್ಗೆ ಚರ್ಚೆ ನಡೆಯುವ ಸಂಭವವಿದೆ ಎಂದು ಸಿಎಂ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ಚರ್ಚೆ ಮಾಡುವ ಸಲುವಾಗಿ ಅಧಿವೇಶ ನಡೆಯಲಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು, ನೀರಾವರಿ ಬಗ್ಗೆ ಚರ್ಚೆ ಆಗುವ ಸಂಭವ ಇದೆ ಎಂದರು.
ಬೆಳೆ ಪರಿಹಾರ ವಿಚಾರವಾಗಿ ಮಾತನಾಡಿ, ಅಕಾಲಿಕ ಮಳೆಯಿಂದ ಬೆಳಹಾನಿಯಾದ ರೈತರಿಗೆ ಪರಿಹಾರ ನೀಡುವ ಕಾರ್ಯ ಪ್ರಾರಂಭವಾಗಿದೆ. ಪ್ರತಿನಿತ್ಯ ನೀಡುತ್ತಿದ್ದೇವೆ. ಬೆಳಹಾನಿ ಸರ್ವೇ ಅಪ್ಲೋಡ್ ಆದ ಕೂಡಲೇ ಪರಿಹಾರ ನೀಡಲಾಗುತ್ತಿದೆ. ನವೆಂಬರ್ ತಿಂಗಳಲ್ಲಿ ಆದ ಹಾನಿಗೆ ಪ್ರತಿನಿತ್ಯ ಪರಿಹಾರ ನೀಡಲಾಗುತ್ತಿದೆ ಎಂದರು.
ಓಮಿಕ್ರಾನ್ ಹಾಗೂ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ಈವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಆದರೂ ಎಲ್ಲದರ ಮೇಲೂ ಗಮನ ಇಟ್ಟಿದ್ದೇವೆ, ನೋಡಿಕೊಂಡು ನಿರ್ಧಾರ ಮಾಡುತ್ತೇವೆ ಎಂದರು.
ಗುರುವಾರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆದಿದ್ದು, ಸಭೆಯಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಿದೆ. ಆದರೆ ಸದ್ಯಕ್ಕೆ ನೈಟ್ ಕರ್ಫ್ಯೂ ಹಾಗೂ ಕಠಿಣ ನಿರ್ಬಂಧ ಇಲ್ಲ ಎಂದು ಸಭೆಯ ಬಳಿಕ ಸಿಎಂ ಸ್ಪಷ್ಟಪಡಿಸಿದ್ದಾರೆ.