ರಾಜ್ಯದಲ್ಲೆಡೆ ಭಾರೀ ಮಳೆ ಜನಜೀವನ ಅಸ್ತವ್ಯಸ್ಥ: ವರುಣನ ಆರ್ಭಟಕ್ಕೆ ಹಲವೆಡೆ ಜಲಾವೃತ, ಐವರು ಸಾವು
ಬೆಂಗಳೂರು: ಹವಾಮಾನ ವೈಪರಿತ್ಯದಿಂದಾಗಿ ಕಳೆದ ಒಂದು ವಾರದಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ), ರಾಜ್ಯದೆಲ್ಲೆಡೆ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ವರುಣನ ಆರ್ಭಟದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿನ ಮನೆಗಳು ಜಲಾವೃತಗೊಂಡಿವೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ರೆಡ್ ಅಲರ್ಟ್ ಘೋಷಣೆಯ ಕಾರಣ, ಇಂದು ಶಾಲಾ-ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆಯಾಗಿದೆ.
ಬೆಂಗಳೂರಿನಲ್ಲಿ ರಾತ್ರಿಯಿಡೀ ಎಡಬಿಡದೇ ಮಳೆ ಸುರಿಯುತ್ತಿದ್ದು, ಅನೇಕ ರಸ್ತೆಗಳು ಜಲಾವೃತಗೊಂಡಿವೆ. ಸೇತುವೆಗಳ ತಗ್ಗು ಪ್ರದೇಶಗಳಲ್ಲಿ ರಸ್ತೆಯಲ್ಲೇ ನೀರು ನಿಂತ ಪರಿಣಾಮ, ವಾಹನ ಸವಾರರು ಪರದಾಡುವಂತೆ ಆಗಿದೆ.
ಮತ್ತೊಂದೆಡೆ ನಗರದ ವಿವಿಧ ಭಾಗಗಳಲ್ಲಿನ ತಗ್ಗು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲದೇ ಜನ ಸಾಮಾನ್ಯರ ಬದುಕೇ ವರುಣನ ಆರ್ಭಟದಿಂದ ದುಸ್ತರವಾಗಿದೆ.
ಇನ್ನೂ ರಾಜ್ಯ ರಾಜಧಾನಿಯಷ್ಟೇ ಅಲ್ಲದೇ ಚಿತ್ರದುರ್ಗದಲ್ಲಿ ರಾತ್ರಿಯಿಡೀ ಸುರಿದಂತ ಮಳೆಯಿಂದಾಗಿ ಇದುವರೆಗೆ ಆರು ಜನರು ಸಾವನ್ನಪ್ಪಿದಂತೆ ಆಗಿದೆ. ಇಂದು ಮನೆ ಕುಸಿತಗೊಂಡ ಕಾರಣ ಚಳ್ಳಕೆರೆ ತಾಲೂಕಿನ ನಾಯಕನ ಹಟ್ಟಿಯಲ್ಲಿ ದಂಪತಿಗಳು ಮೃತಪಟ್ಟಿದ್ದಾರೆ.
ಉತ್ತರ ಕರ್ನಾಟಕ ಅನೇಕ ಭಾಗಗಳಲ್ಲಿ ಹಳ್ಳಗಳು ಉಕ್ಕಿ ಹರಿಯುತ್ತಿರೋ ಕಾರಣ, ಸೇತುವೆಗಳು ಮುಳುಗಡೆಗೊಂಡಿವೆ. ಅನೇಕ ಹಳ್ಳಿಗಳಿಗೆ ಸಾರ್ವಜನಿಕ ಸಂಪರ್ಕ ಕಡಿತಗೊಂಡಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿಯೂ ವರುಣಾಘಾತಕ್ಕೆ ಜನಜೀವನ ಅಸ್ಥವ್ಯಸ್ಥಗೊಂಡಿದೆ.
ತುಮಕೂರು ತಾಲ್ಲೂಕು ಕಸಬಾ ಹೋಬಳಿ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಶಿವಕುಮಾರ್ ಎಂಬ ರೈತರ ಕೋಳಿ ಫಾರಂ ಗೆ ನೀರು ನುಗ್ಗಿ ಸಾವಿರಾರು ಕೋಳಿಗಳು ಸಾವನ್ನಪ್ಪಿದಾವೆ.
ಭಾರೀ ಮಳೆಯಿಂದಾಗಿ ಕೊಯ್ಲಿಗೆ ಬಂದಂತ ಭತ್ತದ ಬೆಳೆ ನೀರಿನಲ್ಲಿ ಮುಳುಗಿ ಹಾಳಾಗುತ್ತಿದ್ದರೇ, ಕೊಯ್ದಿದ್ದಂತ ಭತ್ತ ನೀರಿನಲ್ಲಿ ಕೊಚ್ಚಿ ಹೋಗುವಂತೆ ಆಗಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವರುಣನ ಆರ್ಭಟ ಅದ್ಯಾವಗ ನಿಲ್ಲುತ್ತೋ ಅಂತ ಜನರು ಗೊಣಗುವಂತೆ ಆಗಿದೆ.
ಒಟ್ಟಾರೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವಂತ ಮಳೆರಾಯನ ಆರ್ಭಟಕ್ಕೆ, ಕರ್ನಾಟಕದ ಜನರು ತತ್ತರಿಸಿ ಹೋಗಿದ್ದಾರೆ. ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ಕೈಗೆ ಬಂದ ಬೆಳೆ ಸಿಗದಂತೆ ಆಗಿ, ರೈತರ ಬದುಕೇ ದುಸ್ತರವಾಗಿದೆ.