ಚುನಾವಣೆ ಹೊತ್ತಲಿ ಜೋರಾಯ್ತು ಆಪರೇಷನ್‌ ಅಸ್ತ!: ಬಿಎಸ್ವೈ ನಂಬಿ ಬಂದ ವಲಸಿಗರಿಗೆ ಶುರುವಾಯ್ತು ಆತಂಕ

ಚುನಾವಣೆ ಹೊತ್ತಲಿ ಜೋರಾಯ್ತು ಆಪರೇಷನ್‌ ಅಸ್ತ!: ಬಿಎಸ್ವೈ ನಂಬಿ ಬಂದ ವಲಸಿಗರಿಗೆ ಶುರುವಾಯ್ತು ಆತಂಕ

ಬೆಂಗಳೂರು, ಮಾರ್ಚ್23:‌ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ರಾಜಕೀಯ ನಾಯಕರು ಹಲವು ತಂತ್ರಗಾರಿಕೆಯನ್ನ ನಡೆಸುತ್ತಿದ್ದಾರೆ.

ಅನ್ಯ ಪಕ್ಷದ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದು, ಬಿಜೆಪಿ ನಾಯಕರನ್ನ ಸೆಳೆಯಲು ಕಾಂಗ್ರೆಸ್‌ ಸೈಲೆಂಟ್‌ ಪ್ಲಾನ್‌ ದಿನೇ ದಿನೇ ಸಕ್ಸಸ್‌ ಕಾಣುತ್ತಿದೆ.

ಈಗಾಗಲೇ ಆಪರೇಷನ್‌ ಅಸ್ತದ ಮೂಲಕ ಹಲವು ಸಚಿವರು, ಶಾಸಕರ, ಮಾಜಿ ಹಾಲಿ ಸಂಸದರು ಸೇರಿದಂತೆ ವಿಧಾನ ಪರಿಷತ್‌ ಸದಸ್ಯರಿಗೆ ಕಾಂಗ್ರೆಸ್‌ ಗಾಳ ಹಾಕಿದ್ದು, ಬಿಜೆಪಿ ಕಲಿಗೆ ಶಾಕ್‌ ಕೊಟ್ಟಂತಾಗಿದೆ.

ಈಗಾಗಲೇ ಇಬ್ಬರು ಬಿಜೆಪಿಯ ವಿಧಾನ ಪರಿಷತ್‌ ಸದಸ್ಯರನ್ನ ಪಕ್ಷಕ್ಕೆ ಕರೆತರುವಲ್ಲಿ ಕಾಂಗ್ರೆಸ್‌ ಸಕ್ಸಸ್‌ ಆಗಿದ್ದು, ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕ ಬಾಬು ರಾವ್ ಚಿಂಚನಸೂರು ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಇನ್ನೂ ಆಡಳಿತರೂಢ ಬಿಜೆಪಿ ಪಕ್ಷದಲ್ಲಿದ್ದ ಮಾಜಿ ಶಾಸಕರು, ಪರಿಷತ್ ಸದಸ್ಯರು ಕಮಲ ತೊರೆದು ಕೈ ಹಿಡಿದಿದ್ದಾರೆ. ಜೊತೆಗೆ ಸಚಿವರಾಗಿರುವ ಕೆ.ಸಿ ನಾರಾಯಣ ಗೌಡ ಸೇರಿದಂತೆ ಮತ್ತೆ ಕೆಲವರು ಕಾಂಗ್ರೆಸ್ ನತ್ತ ವಲಸೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೇ ಅಲ್ಲದೇ ಸಚಿವರಾದ ಬೈರತಿ ಬಸವರಾಜ್‌ ಅವರು ಸಹ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಚರ್ಚೆ ಜೋರಾಗಿದೆ.

ಈ ಹಿಂದೆ ಮೈತ್ರಿ ಸರ್ಕಾರದ ಪತನದ ನಂತರ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ನಾಯಕತ್ವವನ್ನ ಹಾಗೂ ಬಿಎಸ್ವೈ ಕೊಟ್ಟ ಭರವಸೆ ಮೇರೆಗೆ 17 ಜನ ನಾಯಕರು ಬಿಜೆಪಿ ಪಕ್ಷವನ್ನ ಸೇರ್ಪಡೆಯಾಗಿದ್ದರು. ಆದರೆ, ಸದ್ಯದ ರಾಜಕೀಯ ಲೆಕ್ಕಾಚಾರವನ್ನ ನೋಡುವುದಾದರೆ ಬಿಜೆಪಿಯಲ್ಲಿ ಬಂದಿರುವ ವಲಸಿಗರ ಸ್ಥಿತಿ ಮುಂದಿನ ದಿನಗಳಲ್ಲಿ ಕಷ್ಟಕರವಾಗಿದೆ ಎನ್ನುವ ಚರ್ಚೆ ಹೆಚ್ಚಾಗಿದೆ.

ಈ ಬಾರಿ ವಲಸೆ ಬಂದಿರುವ ನಾಲ್ಕೈದು ಜನರಿಗೆ ಟಿಕೆಟ್‌ ನೀಡುವುದೇ ಡೌಟ್‌ ಎನ್ನುವ ಚರ್ಚೆ ಕಮಲ ಪಾಳಯದಲ್ಲಿ ಶುರುವಾಗಿದ್ದು, ಇದು ವಲಸಿಗರನ್ನ ನಿದ್ದೆಗೆಡಿಸುವಂತೆ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಅತಿ ಉತ್ಸಾಹದಲ್ಲಿರುವ ಕಾಂಗ್ರೆಸ್ ಬಿಜೆಪಿಯ ಹಲವು ನಾಯಕರಿಗೆ ಬಲೆ ಹಾಕಿದೆ. ಆದರೆ, ಇದನ್ನು ತಡೆಯುವಲ್ಲಿ ಬಿಜೆಪಿ ವಿಫಲವಾಗುತ್ತಿದೆ.

ಬಿಎಸ್‌ ಯಡಿಯೂರಪ್ಪ ನವರನ್ನ ನಂಬಿ ಹೋದ ನಾಯಕರಿಗೆ ಮುಂದಿನ ರಾಜಕೀಯ ಭವಿಷ್ಯವೇ ಅತಂತ್ರವಾಗಿದ್ದು, ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಸಿಗದೇ ಇದ್ದಲಿ ಎಂಬ ಲೆಕ್ಕಾಚಾರ ಶುರುವಾಗಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ನವರನ್ನ ಬಿಟ್ಟು ಇದನ್ನೆಲ್ಲಾಇದನ್ನೆಲ್ಲಾ ನಿಭಾಯಿಸುವ ಹಾಗೂ ನಿರ್ವಹಿಸುವ ನಾಯಕತ್ವ ಬಿಜೆಪಿಯಲ್ಲಿ ಕಾಣುತ್ತಿಲ್ಲ ಎಂಬ ಅಭಿಪ್ರಾಯ ಪಕ್ಷದೊಳಗಿನಿಂದಲೇ ಕೇಳಿಬರುತ್ತಿದೆ.

ಈ ಹಿಂದೆ ಕೊಟ್ಟ ಮಾತಿನಂತೆ ಬಿ ಎಸ್‌ ಯಡಿಯೂರಪ್ಪನವರು ನಡೆದುಕೊಳ್ಳುತ್ತಾರೆ ಎಂಬ ಭರವಸೆಯೂ ವಲಸಿಗರಲ್ಲಿ ಇತ್ತು. ಈ ಕಾರಣಕ್ಕಾಗಿಯೇ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರು ಕಮಲ ಸೇರಿಕೊಂಡಿದ್ದರು. ಆದರೆ, ಈಗಿನ ರಾಜಕೀಯ ಚಿತ್ರಣ ಬದಲಾಗಿದ್ದು, ಯಾರ ಬಳಿಯಲ್ಲಿ ನಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳಬೇಕೂ ಎನ್ನುವ ಗೊಂದಲದಲ್ಲಿ ವಲಸಿಗ ನಾಯಕರಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಮಾಜಿ ಮುಖ್ಯಮಂತ್ರಿಯಾಗಿರುವ ಬಿ ಎಸ್‌ ಯಡಿಯೂರಪ್ಪ ನವರು ರಾಜ್ಯದ ಮಾಸ್‌ ಲೀಡರ್‌ ಆಗಿದ್ದಾರೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಅಯಕಟ್ಟಿನ ಸ್ಥಾನಮಾನವಿಲ್ಲ. ಇನ್ನೂ ಪಕ್ಷದ ಸಭೆಯಲ್ಲಿಯೂ ಅವರ ಪಾತ್ರ ಅಷ್ಟರಮಟ್ಟಿಗೆ ಪ್ರಭಾವ ಬೀರುತ್ತಿಲ್ಲ. ಜೊತೆಗೆ ಅವರ ಹೊರತಾಗಿ ಇಂತಹ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುವ ಜವಾಬ್ದಾರಿಯನ್ನು ಯಾರೂ ಹೊರುತ್ತಿಲ್ಲ.

ಇನ್ನೂ ಬಿಜೆಪಿಯಲ್ಲಿರುವ ಮೂಲ ಹಾಗೂ ವಲಸಿಗ ನಾಯಕರಿಗೆ ನಾಯಕತ್ವದ ಜವಾಬ್ದಾರಿಯನ್ನ ಹೊರುವ ನಾಯಕರು ಕಾಣುತ್ತಿಲ್ಲ ಹೀಗಾಗಿ, ಈ ಹಿಂದೆ ಬಿಜೆಪಿ ಪಕ್ಷಕ್ಕೆ ಸೇರಿದ್ದ ಹಲವು ಜನ ವಲಸಿಗ ಶಾಸಕರಿಗೆ ಮತ್ತೆ ಮಾತೃ ಪಕ್ಷಕ್ಕೆ ಮರಳಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಅಸಮಾಧಾನಿತರ ನಾಯಕರಿಗೂ ಸಹ ಕಾಂಗ್ರೆಸ್‌ ಈಗಾಗಲೇ ಆಪರೇಷನ್‌ ಅಸ್ತದ ಮೂಲಕ ಗಾಳ ಹಾಕುತ್ತಿದೆ.

ಬಿ ಎಸ್‌ ಯಡಿಯೂರಪ್ಪ ಕೊಟ್ಟ ಮಾತಿನಂತೆ ಸಚಿವ ಸ್ಥಾನ ಹಾಗೂ ಪ್ರಮುಖ ಖಾತೆಗಳನ್ನ ನೀಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ತಮ್ಮ ತಮ್ಮ ಕ್ಷೇತ್ರದಿಂದ ವಲಸಿಗರಿಗೆ ಟಿಕೆಟ್‌ ನೀಡುತ್ತಾರಾ ಎಂಬ ಅನುಮಾನ ಶುರುವಾಗಿದೆ. ಹೀಗಾಗಿ ತಮ್ಮ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿಗೆ ಬಂದಿದ್ದ ವಲಸಿಗರಿಗೆ ಇದೀಗ ಮತ್ತೆ ಆತಂಕ ಮೂಡಿಸಿದ್ದು, ಇದರ ಲಾಭವನ್ನ ಆಪರೇಷನ್‌ ಅಸ್ತದ ಮೂಲಕ ಕಾಂಗ್ರೆಸ್‌ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.