ವಿವಾಹಿತ ಮಹಿಳೆಯೊಂದಿಗೆ ಸಂಬಂಧ: ಕಾರಿನೊಳಗೆ ಕಟ್ಟಿಹಾಕಿ ವ್ಯಕ್ತಿಯ ಸಜೀವ ದಹನ

ವಿವಾಹಿತ ಮಹಿಳೆಯೊಂದಿಗೆ ಸಂಬಂಧ: ಕಾರಿನೊಳಗೆ ಕಟ್ಟಿಹಾಕಿ ವ್ಯಕ್ತಿಯ ಸಜೀವ ದಹನ

ಆಂಧ್ರ ಪ್ರದೇಶ:‌ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಕಟ್ಟಿಹಾಕಿ ಸಜೀವವಾಗಿ ದಹನ ಮಾಡಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಚಿತ್ತೂರುನಲ್ಲಿ ನಡೆದಿರುವುದು ವರದಿಯಾಗಿದೆ.

ಮೃತರನ್ನು ನಾಗರಾಜು ಎಂದು ಗುರುತಿಸಲಾಗಿದೆ. ನಾಗರಾಜ್‌ ಅವರ ಕಿರಿಯ ಸಹೋದರ ಪುರುಷೋತ್ತಮ್ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ರಾಮಚಂದ್ರಪುರಂ ಮಂಡಲದ ನಿವಾಸಿಯಾದ ವಿವಾಹಿತ ಮಹಿಳೆಯೊಬ್ಬರ ಜೊತೆ ಅಕ್ರಮವಾಗಿ ಸಂಬಂಧವನ್ನು ಇಟ್ಟುಕೊಂಡಿದ್ದರು.

ಈ ವಿಚಾರವನ್ನು ವಿವಾಹಿತ ಮಹಿಳೆಯಾಗಿರುವ ರಿಪುಂಜಯ ಅವರ ಮನೆಯವರು ವಿರೋಧಿಸಿದ್ದಾರೆ. ವಿಚಾರವನ್ನು ಬಗೆಹರಿಸುವ ಸಲುವಾಗಿ ಪುರುಷೋತ್ತಮ್ ಅವರ ಹಿರಿಯ ಸಹೋದರ ನಾಗರಾಜು ಅವರನ್ನು ಮಹಿಳೆಯ ಮನೆಯವರು ಕರೆದಿದ್ದಾರೆ.

ಮಹಿಳೆಯ ಕುಟುಂಬ ಸದಸ್ಯರು ಮತ್ತು ನಾಗರಾಜು ಅಜ್ಞಾತ ಸ್ಥಳಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ, ಮಹಿಳೆಯ ಮನೆಯವರು ನಾಗರಾಜು ಅವರನ್ನು ಥಳಿಸಿದ್ದಾರೆ. ಆ ಬಳಿಕಅವರನ್ನು ಕಾರಿನೊಳಗೆ ಹಗ್ಗದಿಂದ ಕಟ್ಟಿಹಾಕಲಾಗಿದೆ. ನಂತರ ಕಾರಿನಿಂದ ಇಳಿದು ಅದರ ಮೇಲೆ ಪೆಟ್ರೋಲ್‌ ಹಾಕಿ ಬೆಂಕಿಯಿಟ್ಟಿದ್ದಾರೆ.ಬೆಂಕಿ ಆಗುತ್ತಿದ್ದ ಕಾರನ್ನು ಬೆಟ್ಟದ ಕೆಳಗೆ ದೂಡಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದೇ ಮರಕ್ಕೆ ಢಿಕ್ಕಿ ಹೊಡೆದು ಕಾರು ಅಲ್ಲೇ ನಿಂತಿದೆ. ಕಾರಿನೊಳಗಿದ್ದ ನಾಗರಾಜು ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ ಎಂದು ʼಇಂಡಿಯಾ ಟುಡೇʼ ವರದಿ ತಿಳಿಸಿದೆ.

ಅಕ್ಕಪಕ್ಕದಲ್ಲಿದ್ದ ಕೆಲ ಜನರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರಿನೊಳಗಿದ್ದ ನಾಗರಾಜು ಅವರನ್ನು ಉಳಿಸುವ ಯತ್ನವನ್ನು ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು, ಆರೋಪಿಗಳಿಗೆ ಹುಡಕಾಟ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.