ಕಾಮಗಾರಿಯಿಂದ ಟ್ರಾಫಿಕ್, ಇದೀಗ ದ್ವಿಮುಖ ರಸ್ತೆ ಸಂಚಾರಕ್ಕೆ ಮುಕ್ತ

ಕಾಮಗಾರಿಯಿಂದ ಟ್ರಾಫಿಕ್, ಇದೀಗ ದ್ವಿಮುಖ ರಸ್ತೆ ಸಂಚಾರಕ್ಕೆ ಮುಕ್ತ

ಬೆಂಗಳೂರು;  ಡಿಸೆಂಬರ್ 02: ಬೆಂಗಳೂರಿನಾದ್ಯಂತ ಅಲ್ಲಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಪೈಕಿ ಬಿಟಿಎಂ ಬಡಾವಣೆ ಸುತ್ತಮುತ್ತಲ ಸವಾರರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿ ನೀಡಿದೆ.

ಮೆಟ್ರೋ ಕಾಮಗಾರಿಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದ ಬಿಟಿಎಂ ಲೇಔಟ್‌ ಮೆಟ್ರೋ ನಿಲ್ದಾಣದ ಬಳಿ ದ್ವಿಮುಖ ರಸ್ತೆಯನ್ನು ಗುರುವಾರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಬಡಾವಣೆಯ 16ನೇ ಮುಖ್ಯರಸ್ತೆಯಲ್ಲಿ ಮೆಟ್ರೋ ರೈಲು ಮಾರ್ಗದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಮಾರ್ಗದ ಕೆಳಗೆ ಬರುವ ಇಲ್ಲಿನ ದ್ವಿಮುಖ ರಸ್ತೆಯನ್ನು ಬಂದ್‌ ಮಾಡಲಾಗಿತ್ತು. ಸವಾರರಿಗಾಗಿ ಪರ್ಯಾಯ ಮಾರ್ಗ ಸೂಚಿಸಲಾಗಿತ್ತು.

ಆದರೆ ಸರ್ವಿಸ್‌ ರಸ್ತೆಗಿಂತಲೂ ಈ ಬದಲಿ ಮಾರ್ಗ ಚಿಕ್ಕದಾಗಿರುವ ಕಾರಣ ಸಂಚಾರಕ್ಕೆ ತೊಂದರೆ ಆಗಿದೆ. ನಿತ್ಯ ಸಾವಿರಗಟ್ಟಲೆ ವಾಹನ ಈ ಮಾರ್ಗವಾಗಿ ಸಾಗುವುದರಿಂದ ಮಾದರಿಯ ಈ ರಸ್ತೆ ಚಿಕ್ಕದಾಗಿದ್ದರಿಂದ ವಾಹನ ಸಂಚಾರ ದಟ್ಟಣೆ ಉಂಟಾಗಿ ಸವಾರರು ಕಿರಿಕಿರಿ ಅನುಭವಿಸುತ್ತಿದ್ದರು. ಮೈಕೋ ಲೇಔಟ್‌ ಸಂಚಾರ ಠಾಣೆ ಪೊಲೀಸರು, ಬಿಎಂಆರ್‌ಸಿಎಲ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಮೆಟ್ರೋ ನಿಲ್ದಾಣದ ಕೆಳ ಭಾಗದ ದ್ವಿಮುಖ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು.

ಯಾವ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ?

ಬಿಟಿಎಂ ಲೇಔಟ್‌ 16ನೇ ಮುಖ್ಯರಸ್ತೆ ಮೆಟ್ರೋ ನಿಲ್ದಾಣದ ಕಡೆಗಿನಿಂದ ಈಸ್ಟ್‌ ಎಂಡ್‌ ರಸ್ತೆ ಮಾರ್ಗವಾಗಿ ಸಿಲ್ಕ್‌ ಬೋರ್ಡ್‌ ನತ್ತ ಸಂಚರಿಸುವ ರಸ್ತೆಯಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಈ ಭಾಗದಲ್ಲಿ ವಾಹನ ಸಂಚಾರ ದಟ್ಟಣೆ ತಗ್ಗಿದೆ. ಅಷ್ಟೇ ಅಲ್ಲದೆ ಬಿಟಿಎಂ ಬಡಾವಣೆಯ‌ ಮೆಟ್ರೋ ನಿಲ್ದಾಣದ ಬಳಿ ಸಂಚಾರ ನಿರ್ವಹಣೆಗೆಂದು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿರುವುದಾಗಿ ಪೊಲೀಸ್‌ ಆಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರಿಗೆ, ಸವಾರರಿಗೆ ಅನುಕೂವಲಾಗುವ ನಿರ್ಧಾರಕ್ಕೆ ಸ್ಪಂದಿಸಿದ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ.ಎಂ.ಎ.ಸಲೀಂ ಟ್ವಿಟರ್‌ನಲ್ಲಿ ಧನ್ಯವಾದ ಅರ್ಪಿಸಿದ್ದಾರೆ. ಇದರಿಂದ ವಾಹನ ಸುಗಮ ಸಂಚಾರಕ್ಕೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ಮೆಟ್ರೋ ಕಾಮಗಾರಿ ಸ್ಥಳಗಳಲ್ಲಿ ಸಂಚಾರ ಸಮಸ್ಯೆ

ಬೆಂಗಳೂರಿನಲ್ಲಿ ಈಗಾಗಲೇ ವೈಟ್‌ಫಿಲ್ಡ-ಕೆಆರ್‌ ಪುರಂ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೊಮ್ಮಸಂದ್ರ- ಆರ್‌ವಿ ರಸ್ತೆ ಹೀಗೆ ಹಲವು ಕಡೆಗಳಲ್ಲಿ ಮೆಟ್ರೋ ಮಾರ್ಗ, ನಿಲ್ದಾಣ ನಿರ್ಮಾಣ ಕೆಲಸ ನಡೆಯುತ್ತಿದೆ. ಈ ಪ್ರದೇಶಗಳಲ್ಲಿ ರಸ್ತೆ ಮೇಲೆ ಮೆಟ್ರೋ ಪಿಲ್ಲರ್, ಮೇಲ್ಸೇತುವೆ ಕಾಮಗಾರಿ ಸಂಬಂಧ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ.

ಇದಲ್ಲದೇ ರಾಜ್ಯ ಸರ್ಕಾರ ಇತ್ತೀಚೆಗೆ 44.65ಕಿಲೋ ಮೀಟರ್ ಉದ್ದದ ಮೆಟ್ರೋ ಮೂರನೇ ಹಂತದ ಕಾಮಗಾರಿ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಜೆಪಿ ನಗರ 4ನೇ ಹಂತದಿಂದ ಹೆಬ್ಬಾಳವರೆಗೆ ಒಟ್ಟು 32ಕಿಲೋ ಮೀಟರ್ ಉದ್ದದ ಮಾರ್ಗವು ಮೊದಲ ಕಾರಿಡಾರ್‌ನಲ್ಲಿ ತಯಾರಾಗಲಿದೆ. ಇದಕ್ಕಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಟ್ 13000 ಕೋಟಿ ರೂ.ನಿಂದ 16000ಸಾವಿರ ಕೋಟಿ ವರೆಗೆ ಅಂದಾಜು ವೆಚ್ಚ ತಗಲಲಿದೆ ಎಂದು ತಿಳಿದು ಬಂದಿದೆ. ಈ ಮಾರ್ಗದಲ್ಲಿ ಸರ್ವೇ ಕಾರ್ಯ, ಆರಂಭಿಕ ಕೆಲಸಗಳು ಭರದಿಂದ ಸಾಗಿವೆ. ಕೆಲಸ ಆರಂಭವಾದರೆ ಇಲ್ಲಿ ಸಹ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.