ಕಳಪೆ ಮಸಾಲಾ ಪದಾರ್ಥ ಮಾರಾಟ ದಂಧೆ

ಕಳಪೆ ಮಸಾಲಾ ಪದಾರ್ಥ ಮಾರಾಟ ದಂಧೆ

ವಾಡಿ: ಚಿತ್ತಾಪುರ ತಾಲೂಕಿನ ವಿವಿಧೆಡೆ ಕೆಲ ಕಿರಾಣಿ ಅಂಗಡಿಗಳಲ್ಲೀಗ ನಕಲಿ ಪದಾರ್ಥಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ.

ಪಟ್ಟಣದ ಮಾರುಕಟ್ಟೆಯಲ್ಲಿಯೂ ಕಳಪೆ ಆಹಾರ ಉತ್ಪನ್ನಗಳ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಖಾರಾ, ಅರಿಶಿಣ, ಸಾಂಬಾರ ಪದಾರ್ಥಗಳು ಗುಣಮಟ್ಟ ಕಳೆದುಕೊಂಡಿವೆ.

ಬಣ್ಣದಿಂದ ಗಮನ ಸೆಳೆಯುವ ಈ ಅಡುಗೆ ಪದಾರ್ಥಗಳಲ್ಲಿ ಸುಗಂಧ ಸುವಾಸನೆ ಗೌಣವಾಗಿದೆ. ಕಡಿಮೆ ದರದ ನೆಪದಲ್ಲಿ ನಕಲಿ ಸಾಬೂನು ಮತ್ತು ವಾಶಿಂಗ್‌ ಪೌಡರ್‌ ಮಾರಾಟ ಮಾಡಲಾಗುತ್ತಿದೆ.

ರೈಲ್ವೆ ಜಂಕ್ಷನ್‌ ಹೊಂದಿರುವ ವಾಡಿಯ ಮಾರುಕಟ್ಟೆಗೆ ಹೈದರಾಬಾದ ಮೂಲದ ವಿವಿಧ ಕಂಪನಿಗಳು ಐದಾರು ರೀತಿಯ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ ಪದಾರ್ಥವನ್ನು ವಿವಿಧ ಹೆಸರಿನಡಿ ಪೂರೈಸುತ್ತಿವೆ. ಐದು ಕೆಜಿ ತೂಕದ ಈ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ ಕೇವಲ ವಾಸನೆ ಹರಡುತ್ತಿದೆ. ಗೋಧಿ ಹಿಟ್ಟಿನ ಕಣಕದಂತಿರುವ ಇದು ಸಂಪೂರ್ಣ ಕಳಪೆಯಾಗಿದೆ. ಅಡುಗೆಯಲ್ಲಿ ಬಳಸಿದರೆ ಇಡೀ ಅಡುಗೆ ಹಾಳಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಅವಧಿ ಮುಗಿದ ಪದಾರ್ಥಗಳ ಪ್ಯಾಕೇಟ್‌ ಗಳ ಮೇಲೆ ದಿನಾಂಕ ಮತ್ತು ಬೆಲೆ ಗುರುತಿಸುವ ನಕಲಿ ಲೇಬಲ್‌ ಅಂಟಿಸಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಆಹಾರ ಇಲಾಖೆ ಅಧಿಕಾರಿಗಳು ಇಂಥ ವ್ಯವಹಾರಕ್ಕೆ ಕಡಿವಾಣ ಹಾಕಿ ನಕಲಿ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ಗುಣಮಟ್ಟ ನೋಡಿ ಖರೀದಿಸಿ

ಅನಧಿಕೃತ ಕಂಪನಿಗಳಿಂದ ಇಂಥ ನಕಲಿ ಕಲಬೆರಕೆ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿರುತ್ತವೆ. ಗ್ರಾಹಕರು ಪದಾರ್ಥಗಳ ಗುಣಮಟ್ಟ ಮತ್ತು ಅಧಿಕೃತ ಕಂಪನಿಗಳ ಉತ್ಪನ್ನ ಗುರುತಿಸಿ ಖರೀದಿಸಬೇಕು. ವಿಶ್ವಾಸಾರ್ಹತೆ ಇಲ್ಲದ ಯಾವುದೇ ಆಹಾರ ಪದಾರ್ಥ ಖರೀದಿಸಬಾರದು. ಸಂಶಯ ಬಂದಲ್ಲಿ ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳು ಅಥವಾ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಬೇಕು. ಇಂಥಹ ಪ್ರಕರಣಗಳು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಚಿತ್ತಾಪುರದ ಆಹಾರ ಮತ್ತು ಸುರಕ್ಷತಾಧಿಕಾರಿ ಪರಮೇಶ್ವರ ಮಠಪತಿ ತಿಳಿಸಿದ್ದಾರೆ.