ಅತಿಥಿ ಉಪನ್ಯಾಸಕ'ರ ವಿವಿಧ ಬೇಡಿಕೆ ಈಡೇರಿಕೆಗೆ ಕ್ರಮ - ಸಚಿವ ಅಶ್ವತ್ಥನಾರಾಯಣ ಭರವಸೆ
ಬೆಂಗಳೂರು: ಸೇವಾ ಭದ್ರತೆಯೊಂದಿಗೆ ( Service Security ) ವಾರ್ಷಿಕ ಶೇ.5ರಷ್ಟು ಗೌರವಧನ ಹೆಚ್ಚಳ, ನಿವೃತ್ತಿಯ ಸಂದರ್ಭದಲ್ಲಿ 25 ಲಕ್ಷ ರೂ.ಗಳ ಇಡಿಗಂಟು ಮತ್ತು ಕಾಯಂ ಉಪನ್ಯಾಸಕರಿಗೆ ನೀಡುವಂತೆ ತಮಗೂ ಓಓಡಿ ಹಾಗೂ ರಜೆ ಸೌಲಭ್ಯ ನೀಡಬೇಕು ಮುಂತಾದ 15 ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ( Guest Lecturer ) ಹಿತರಕ್ಷಣಾ ಸಮಿತಿಯು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಅವರಿಗೆ ಸೋಮವಾರ ಸಲ್ಲಿಸಿದೆ.ಸಂಘಟನೆಯ ಗೌರವಾಧ್ಯಕ್ಷರಾಗಿರುವ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ನೇತೃತ್ವದಲ್ಲಿ ಸಂಘದ ರಾಜ್ಯಾಧ್ಯಕ್ಷ ಅರುಣ್ ಶಿವಮೊಗ್ಗ ಮತ್ತಿತರರು ಈ ಮನವಿಯನ್ನು ಕೊಟ್ಟರು. ಮನವಿ ಸ್ವೀಕರಿಸಿದ ಸಚಿವರು, ಈ ಬೇಡಿಕೆಗಳನ್ನು ಈಡೇರಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.
ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ಎನ್‌ಇಪಿ ಜಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ಸೇವಾ ವಿಲೀನದ ಸೌಲಭ್ಯ ನೀಡುವ ಮೂಲಕ, ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು. ಹಾಗೆಯೇ ಎನ್‌ಇಪಿ ಅನುಸಾರ 40-50 ವಿದ್ಯಾರ್ಥಿಗಳಂತೆ ಒಂದೊಂದು ತರಗತಿಗಳನ್ನು ವಿಭಾಗಿಸುವುದರಿಂದ ತಮ್ಮ ನೇಮಕಾತಿಗೆ ಇಲ್ಲಿ ಪರಿಗಣಿಸಬೇಕು ಎಂದು ಸಂಘಟನೆಯು ಕೇಳಿಕೊಂಡಿದೆ.ಇದರ ಜತೆಗೆ ನೇಮಕಾತಿಗಳಲ್ಲಿ ಮೀಸಲಾತಿ, ವಯೋಮಿತಿ ಸಡಿಲಿಕೆ, ವೇತನಸಹಿತ 6 ತಿಂಗಳ ಮಾತೃತ್ವ/ಪಿತೃತ್ವ ರಜೆ, ವಿಮೆ, ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯಗಳನ್ನು ಕೂಡ ತಮಗೆ ಒದಗಿಸಬೇಕು. ಹಾಗೆಯೇ, ಮೌಲ್ಯಮಾಪನಕ್ಕೆ ತೆರಳಿದ ದಿನಗಳ ಗೌರವಧನವನ್ನು ಕಡಿತ ಮಾಡಬಾರದು. ಪರಸ್ಪರ ಸ್ಥಳ ಬದಲಾವಣೆ ಮತ್ತು ಕಾರ್ಯಭಾರದ ಕೊರತೆ ಉಂಟಾದಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸದೆ ಕಾರ್ಯಭಾರವಿರುವ ಕಾಲೇಜುಗಳಿಗೆ ವರ್ಗಾವಣೆ ಮಾಡುವ ನೀತಿಯನ್ನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.