ಜಾರ್ಖಂಡ್ ನ್ಯಾಯಾಧೀಶರನ್ನು ಬಲಿ ಪಡೆದ 'ಉದ್ದೇಶಪೂರ್ವಕ' ಹಿಟ್ ಅಂಡ್ ರನ್: ಆಟೋ ಚಾಲಕ ಸೇರಿ ಇಬ್ಬರ ಬಂಧನ

ಜಾರ್ಖಂಡ್ ನ್ಯಾಯಾಧೀಶರನ್ನು ಬಲಿ ಪಡೆದ 'ಉದ್ದೇಶಪೂರ್ವಕ' ಹಿಟ್ ಅಂಡ್ ರನ್: ಆಟೋ ಚಾಲಕ ಸೇರಿ ಇಬ್ಬರ ಬಂಧನ

ರಾಂಚಿ: ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಬುಧವಾರ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ವೇಳೆ ನಡೆದ ಉದ್ದೇಶಪೂರ್ವಕ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಅಪಘಾತಕ್ಕೂ ಕೆಲವು ಗಂಟೆಗಳ ಮುನ್ನ ಆಟೋ ಕಳವು ಮಾಡಿದ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಳಗಿನ ಜಾವ 1 ಗಂಟೆ ಸುಮಾರಿಗೆ ತನ್ನ ವಾಹನವನ್ನು ಕಳವು ಮಾಡಲಾಗಿದೆ ಎಂದು ಧನ್ಬಾದ್‌ನ ಮಹಿಳೆಯೊಬ್ಬರು ದೂರು ನೀಡಿದ್ದು, ಆಟೋ ಆ ಮಹಿಳೆಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತ ಬಗ್ಗೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಡಿಐಜಿ ಮಯೂರ್ ಪಟೇಲ್ ಕನ್ಹಯ್ಯಲಾಲ್ ಅವರು ಹೇಳಿದ್ದಾರೆ.

ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ವಿವಿಧ ಪೊಲೀಸ್ ತಂಡಗಳನ್ನು ರಚಿಸಲಾಗಿದೆ" ಎಂದು ಅವರು ತಿಳಿಸಿದರು.

ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಘಟನೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದ್ದು, ಆಟೋ ಚಾಲಕ ಉದ್ದೇಶಪೂರ್ವಕವಾಗಿ ಉತ್ತಮ್ ಆನಂದ್ ಅವರಿಗೆ ಹಿಂದಿನಿಂದ ಹಾಯಿಸಿದಂತೆ ತೋರಿಸುತ್ತಿದೆ.

ಧನ್ಬಾದ್‌ನ ಸೆಷನ್ಸ್ ನ್ಯಾಯಾಧೀಶರು ಗಾಲ್ಫ್ ಮೈದಾನದ ಬಳಿಯ ನಿರ್ಜನ ರಸ್ತೆಯಲ್ಲಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ನ್ಯಾಯಾಧೀಶರು ಹಿರಾಪುರದ ಜೂಡ್ ಕಾಲೋನಿಯಲ್ಲಿರುವ ತಮ್ಮ ಮನೆಯಿಂದ 500 ಮೀಟರ್‌ಗಿಂತಲೂ ಕಡಿಮೆ ದೂರದಲ್ಲಿ ಮೃತಪಟ್ಟಿದ್ದಾರೆ.