ಹಿರಿಯ ನಟ ಲೋಹಿತಾಶ್ವ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ: ಸಚಿವ ಅಶೋಕ್

ಬೆಂಗಳೂರು: ದೀರ್ಘ ಕಾಲದ ಅನಾರೋಗ್ಯದಿಂದ ಇಂದು ನಿಧನರಾದ ಹಿರಿಯ ನಟ ಲೋಹಿತಾಶ್ವ ಅವರ ಪಾರ್ಥಿವ ಶರೀರಕ್ಕೆ ಕಂದಾಯ ಸಚಿವ ಆರ್. ಅಶೋಕ್ ಅಂತಿಮ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 'ನಾನು ಹಲವು ಬಾರಿ ಲೋಹಿತಾಶ್ವ ಅವರ ಮನೆಗೆ ಬಂದು ಅವರ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದೆ.
'ಲೋಹಿತಾಶ್ವ 600ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಇಂಗ್ಲಿಷ್ ಲೆಕ್ಚರರ್ ಆಗಿ ಸರ್ಕಾರಿ ಸೇವೆ ಸಹ ಸಲ್ಲಿಸಿದ್ದರು. ಒಳ್ಳೆಯ ನಟನೆ ಮುಖಾಂತರ ಜನರಿಗೆ ಸಂದೇಶ ಕೊಡುವಂತಹ ನಟನನ್ನು ಕಳೆದುಕೊಂಡಿದ್ದೇವೆ. ಪ್ರೊ. ಲೋಹಿತಾಶ್ವ ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಅಶೋಕ್ ಹೇಳಿದರು.
'ಪುನೀತ್ ರಾಜಕುಮಾರ್ ನಂತರ ಮತ್ತೊಬ್ಬ ನಟನನ್ನು ಕಳೆದುಕೊಂಡಿದ್ದೇವೆ. ಅವರ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ' ಎಂದರು.