ರಾಜ್ಯದಲ್ಲಿ ನಿನ್ನೆ 9 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ

ಬೆಂಗಳೂರು, ಡಿ.2- ರಾಜ್ಯದಲ್ಲಿ 7.50 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಮತ್ತು ಎರಡನೆ ಡೋಸ್ ಲಸಿಕೆ ಸೇರಿ ಈ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ.
ನಿನ್ನೆ ಒಂಬತ್ತೂವರೆ ಲಕ್ಷ ಜನರು ಕೋವಿಡ್ ಲಸಿಕೆ ಪಡೆದಿರುವುದು ದಾಖಲೆ ನಿರ್ಮಿಸಲಾಗಿದೆ. ಶೇ.62ರಷ್ಟು ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಶೇ.92ರಷ್ಟು ಜನ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಇದಕ್ಕಾಗಿ ಆರೋಗ್ಯ ಸೇವೆ ನೀಡುತ್ತಿರುವವರು ಹಾಗೂ ಲಸಿಕೆ ಪಡೆದ ಸಾರ್ವಜನಿಕರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕೇವಲ ಒಂದು ಡೋಸ್ ಲಸಿಕೆ ಪಡೆದರೆ ಸ್ವಲ್ಪ ಪ್ರಮಾಣದ ರೋಗ ನಿರೋಧಕ ಶಕ್ತಿ ಸಿಗುತ್ತದೆ. ಆದರೆ ಎರಡು ಡೋಸ್ ಲಸಿಕೆ ಪಡೆದರೆ ಸಂಪೂರ್ಣ ರೋಗ ನಿರೋಧಕ ಶಕ್ತಿ ದೊರೆಯಲಿದೆ ಎಂದರು.
ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ ನೀಡಬೇಕೆಂಬ ಸಲಹೆ ಬಂದಿದೆ. ಆದರೆ ಆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಮಾಲ್ ಮತ್ತಿತರ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಎರಡೂ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ ಮಾಡಿಲ್ಲ. ಈ ಸಂಬಂಧ ಸಲಹೆ ಬಂದಿದ್ದು, ದೆಹಲಿಯಿಂದ ಮುಖ್ಯಮಂತ್ರಿ ಬಂದ ಬಳಿಕ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಈ ಹಿಂದಿನ ಅನುಭವದ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆಗೆ ಬೇಕಾದ ಎಲ್ಲಾ ಸಿದ್ಧತೆ ಮಾಡಲಾಗಿದೆ. ಪ್ರಯಾಣಿಕರ ಪರಿಶೀಲನೆ ಹಾಗೂ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಎರಡರಿಂದ ಮೂರು ಗಂಟೆಯೊಳಗೆ ಕೋವಿಡ್ ಫಲಿತಾಂಶ ದೊರೆಯಲಿದೆ. ಕೋವಿಡ್ ಪರೀಕ್ಷೆಗೆ ರಾಜ್ಯ ಸರ್ಕಾರ ದರ ನಿಗದಿಪಡಿಸಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ ದರವನ್ನೇ ವಿಧಿಸಲಾಗುತ್ತಿದೆ. ವಿದೇಶಿ ಪ್ರಯಾಣಿಕರ ಪರೀಕ್ಷೆಗೆ ಮೂರು ಸಾವಿರ ರೂ. ನಿಗದಿಪಡಿಸಲಾಗಿದೆ.
ವಿದೇಶದಲ್ಲೂ ಸಾಮಾನ್ಯ ಹಿಮಿಗ್ರೇಷನ್‍ಗೆ ಎರಡರಿಂದ ಮೂರು ಗಂಟೆಯಾಗುತ್ತದೆ. ಇಡೀ ಸಮುದಾಯಕ್ಕೆ ಹರಡುವುದನ್ನು ತಪ್ಪಿಸುವ ಉದ್ದೇಶದಿಂದ ಈ ರೀತಿಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸ್ವಲ್ಪ ವಿಳಂಬವಾದರೂ ಪ್ರಯಾಣಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.