ಹಲವು ಬಗೆ ಮಾಲಿನ್ಯಕಾರಕಗಳಿಂದ ಕಾವೇರಿ ನದಿ ಕಲುಷಿತ: ಐಐಟಿ ಮದ್ರಾಸ್‌

ಹಲವು ಬಗೆ ಮಾಲಿನ್ಯಕಾರಕಗಳಿಂದ ಕಾವೇರಿ ನದಿ ಕಲುಷಿತ: ಐಐಟಿ ಮದ್ರಾಸ್‌

ಚೆನ್ನೈ: ಹಲವು ಬಗೆಯ ಮಾಲಿನ್ಯಕಾರಕಗಳಿಂದ ಕಾವೇರಿ ನದಿ ಕಲುಷಿತಗೊಂಡಿದೆ ಎಂದು ಐಐಟಿ-ಮದ್ರಾಸ್‌ನ ಸಂಶೋಧಕರು ಹೇಳಿದ್ದಾರೆ.

ಎರಡು ವರ್ಷಗಳ ಕಾಲ ಈ ಸಂಶೋಧಕರು ಕೈಗೊಂಡ ಅಧ್ಯಯನ ವರದಿಯಲ್ಲಿ ಹಲವಾರು ಆತಂಕಕಾರಿ ಅಂಶಗಳನ್ನು ಉಲ್ಲೇಖಿಸಲಾಗಿದೆ.

'ಸೈನ್ಸ್‌ ಆಫ್‌ ದಿ ಟೋಟಲ್ ಎನ್ವಿರಾನ್‌ಮೆಂಟ್' ಎಂಬ ವೈಜ್ಞಾನಿಕ ನಿಯತಕಾಲಿಕದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

ಔಷಧ ಕಂಪನಿಗಳ ತ್ಯಾಜ್ಯಗಳು, ಕಾಂತಿವರ್ಧಕ ಉತ್ಪನ್ನಗಳು, ಪ್ಲಾಸ್ಟಿಕ್‌, ಭಾರವಾದ ಲೋಹಗಳು, ಕೀಟನಾಶಕಗಳು ಹಾಗೂ ಬೆಂಕಿ ನಂದಿಸಲು ಬಳಸುವ ರಾಸಾಯನಿಕಗಳು ನದಿಗೆ ಸೇರಿರುವುದನ್ನು ಅಧ್ಯಯನ ತಂಡ ಪತ್ತೆ ಮಾಡಿದೆ.

'ಈ ಮಾಲಿನ್ಯಕಾರಕಗಳು ಜಲಚರಗಳಿಗೆ ಹಾಗೂ ನದಿಪಾತ್ರದ ಪರಿಸರಕ್ಕೆ ಭಾರಿ ಅಪಾಯವನ್ನೊಡ್ಡುತ್ತವೆ. ಔಷಧ ಕಾರ್ಖಾನೆಗಳ ತ್ಯಾಜ್ಯಗಳು ಅತ್ಯಲ್ಪ ಪ್ರಮಾಣದಲ್ಲಿ ನದಿಗೆ ಸೇರಿದರೂ, ಅವುಗಳಿಂದ ಜಲಚರಗಳಿಗೆ, ಮನುಷ್ಯರಿಗೆ ದೀರ್ಘಾವಧಿಯ ಹಾನಿ ಉಂಟಾಗುತ್ತದೆ.' ಎಂದು ಅಧ್ಯಯನದ ನೇತೃತ್ವ ವಹಿಸಿದ್ದ, ಐಐಟಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಲಿಜಿ ಫಿಲಿಪ್‌ ಹೇಳಿದರು.

'ಆರ್ಸೆನಿಕ್, ಜಿಂಕ್, ಕ್ರೋಮಿಯಂ, ಸೀಸ ಹಾಗೂ ನಿಕೆಲ್‌ನಿಂದ ನೀರು ಕಲುಷಿತವಾಗಿರುವುದು ಕಂಡುಬಂದಿದೆ'.

ನೋವು ಶಮನ ಮಾಡುವ ಔಷಧಿಗಳಾದ 'ಐಬುಪ್ರೊಫೆನ್', 'ಡೈಕ್ಲೋಫೆನಾಕ್‌', ರಕ್ತದೊತ್ತಡ ಚಿಕಿತ್ಸೆ ಬಳಸುವ 'ಅಟೆನೊಲಾಲ್‌', 'ಐಸೊಪ್ರಿನಾಲಿನ್‌', ಖಿನ್ನತೆ ನಿವಾರಕ ಔಷಧಿ 'ಕಾರ್ಬಾಮಝೆಪೈನ್‌', ಕೆಲ ಆಯಂಟಿಬಯೋಟಿಕ್‌ಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕಗಳು ನದಿ ನೀರು ಸೇರುತ್ತಿವೆ ಎಂದು ತಂಡ ಹೇಳಿದೆ.